ಬೆಂಗಳೂರು: ಕೇಂದ್ರ ಸರ್ಕಾರದಿಂದ ಅನುದಾನ ತಾರತಮ್ಯ ಆರೋಪಿಸಿ ದೆಹಲಿ ಜಂತರ್ ಮಂತರ್‌ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆಯಲಿರುವ ರಾಜ್ಯ ಕಾಂಗ್ರೆಸ್ ಶಾಸಕರುಗಳ ಪ್ರತಿಭಟನೆಗೆ ವೇದಿಕೆ ಸಿದ್ಧವಾಗಿದೆ. ಕೇಂದ್ರದ ವಿರುದ್ಧ 'ಅನುದಾನ ಅನ್ಯಾಯ'ದ ಅಸ್ತ್ರದೊಂದಿಗೆ ಚಲೋ ದಿಲ್ಲಿ ಹೋರಾಟಕ್ಕೆ ಕೈ ಮುಖಂಡರು ಸಜ್ಜಾಗಿದ್ದಾರೆ.
ಜಂತರ್ ಮಂತರ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಚಿವರು, ಕೈ ಶಾಸಕರಾದಿಯಾಗಿ ಕಾಂಗ್ರೆಸ್ ನಾಯಕರು ಅನುದಾನ ಅನ್ಯಾಯದ ರಣಕಹಳೆ ಮೊಳಗಿಸಲಿದ್ದಾರೆ. ಈಗಾಗಲೇ ಸಿಎಂ, ಡಿಸಿಎಂ, ಸಚಿವರು, ಕೈ ಶಾಸಕರು ದೆಹಲಿಗೆ ತೆರಳಿದ್ದು ಕೇಂದ್ರ ಸರ್ಕಾರಕ್ಕೆ ಅನುದಾನ ತಾರತಮ್ಯದ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಿದೆ.
ರಾಜ್ಯದ ಸಂಸದರು, ಕೇಂದ್ರ ಸಚಿವರಿಗೂ ಆಹ್ವಾನ: ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ಅನುದಾನ ನಮ್ಮ ಹಕ್ಕು, ನಮ್ಮ ಅಭಿವೃದ್ಧಿ ನಮ್ಮ ಜವಾಬ್ದಾರಿ. ಈ ವಿಚಾರವಾಗಿ ಜನರಿಗೆ ಮನದಟ್ಟು ಮಾಡಿಕೊಟ್ಟು, ಕೇಂದ್ರ ಹಾಗೂ ದೇಶದ ಜನರ ಗಮನ ಸೆಳೆಯಲು ರಾಜಕೀಯರಹಿತ ಪ್ರತಿಭಟನೆ ಎಂಬ ಸಂದೇಶದೊಂದಿಗೆ ದೆಹಲಿ ಅಂಗಳಕ್ಕೆ ಕಾಂಗ್ರೆಸ್ ಸರ್ಕಾರ ಧುಮುಕಿದೆ. ಇದು ಬಿಜೆಪಿ ವಿರುದ್ಧದ ಪ್ರತಿಭಟನೆ ಅಲ್ಲ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಿ ರಾಜ್ಯದ ಬಿಜೆಪಿ, ಜೆಡಿಎಸ್ ಸಂಸದರಿಗೆ ಹಾಗೂ ರಾಜ್ಯ ಪ್ರತಿನಿಧಿಸುವ ಸಚಿವರುಗಳಿಗೂ ಖುದ್ದು ಪತ್ರ ಬರೆದು ಮನವಿ ಮಾಡಿದ್ದಾರೆ.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ನಾರಾಯಣ ಸ್ವಾಮಿ ಸೇರಿ ಬಿಜೆಪಿ ಸಂಸದರಿಗೂ ಪತ್ರ ಬರೆದು ಆಹ್ವಾನ ನೀಡಿದ್ದಾರೆ. ಆ ಮೂಲಕ ಇದು ಕರ್ನಾಟಕದ ಹಿತದೃಷ್ಟಿಯಿಂದ ಕನ್ನಡಿಗರ ಮೇಲಿನ ಆರ್ಥಿಕ ದೌರ್ಜನ್ಯದ ವಿರುದ್ಧದ ಪಕ್ಷಾತೀತ ಹೋರಾಟ ಎಂದು ಬಿಂಬಿಸಲು ಮುಂದಾಗಿದ್ದಾರೆ.
ಪತ್ರಿಕಾ ಜಾಹೀರಾತು ಮೂಲಕ ತಿವಿದ ರಾಜ್ಯ ಸರ್ಕಾರ: ದೆಹಲಿಯ ನನ್ನ ತೆರಿಗೆ, ನನ್ನ ಹಕ್ಕು ಹೋರಾಟದ ಪತ್ರಿಕಾ ಜಾಹೀರಾತು ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಕೇಂದ್ರದ ವಿರುದ್ಧ ತೊಡೆ ತಟ್ಟಿ ನಿಂತಿದೆ. ಅನುದಾನ ನೀಡಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ, ಸೌಲಭ್ಯ ನೀಡಿಕೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಎಂಬ ಸಂದೇಶದೊಂದಿಗೆ ರಾಜ್ಯಕ್ಕಾಗಿರುವ ಅನ್ಯಾಯದ ಅಂಕಿಅಂಶವನ್ನು ಜಾಹೀರಾತಿನಲ್ಲಿ ಬಿಚ್ಚಿಡಲಾಗಿದೆ.
ಬರ ಪರಿಹಾರಕ್ಕೆ ಬಿಡಿಗಾಸಿಲ್ಲ, ಮರೀಚಿಕೆಯಾದ 15ನೇ ಹಣಕಾಸು ಆಯೋಗದ 5,495 ಕೋಟಿ ರೂ. ವಿಷೇಶ ಅನುದಾನ ಶಿಫಾರಸು, ತೆರಿಗೆ ಪಾಲಿನಲ್ಲಿ ತಾರತಮ್ಯದಿಂದ ರಾಜ್ಯಕ್ಕಾಗಿರುವ 62,098 ಕೋಟಿ ರೂ. ನಷ್ಟ, ಸಹಭಾಗಿತ್ವ ಯೋಜನೆಗೆ ಅನುದಾನ ಕಡಿತ, ಭದ್ರಾ ಮೇಲ್ದಂಡೆ ಯೋಜನೆಗೆ 2023-24ರಲ್ಲಿ ಘೋಷಿಸಿದ್ದ 5,300 ಕೋಟಿ ರೂ. ಬಿಡುಗಡೆ ಶೂನ್ಯ, ನನಸಾಗದ ಕನಸು ಎಂಬ ಸಂದೇಶದೊಂದಿಗೆ ಕೇಂದ್ರ ಸರ್ಕಾರದ ಅನ್ಯಾಯದಿಂದ ಕರ್ನಾಟಕಕ್ಕೆ 2017-18ರಿಂದ 1,87,000 ಕೋಟಿ ರೂ. ನಷ್ಟ ಎಂಬ ಅಡಿಬರಹದ ಜಾಹೀರಾತು ನೀಡಿ ಕೇಂದ್ರ ಸರ್ಕಾರವನ್ನು ಟೀಕಿಸಿದೆ.
ದೆಹಲಿ ಚಲೋ ಹಿಂದಿದೆ ಹಲವು ಲೆಕ್ಕಾಚಾರ: ರಾಜ್ಯ ಸರ್ಕಾರ ದೆಹಲಿಯಲ್ಲಿ ಹೋರಾಟದ ಬಿಸಿ ಮುಟ್ಟಿಸುತ್ತಿರುವ ಹಿಂದೆ ರಾಜ್ಯ ಕಾಂಗ್ರೆಸ್ನ ಹಲವು ಲೆಕ್ಕಾಚಾರವೂ ಅಡಗಿದೆ ಎಂದು ಹೇಳಲಾಗಿದೆ. ದಿಲ್ಲಿ ಚಲೋ ಮೂಲಕ ರಾಜ್ಯ ಸರ್ಕಾರ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆಯುವ ಯತ್ನ ನಡೆಸಿದಂತೆ ಕಾಣುತ್ತಿದೆ. ಒಂದು ಕೇಂದ್ರ ಸರ್ಕಾರ ತಕ್ಷಣವೇ ಬರಪರಿಹಾರ, ಜಿಎಸ್ಟಿ ಬಾಕಿ, ವಿಶೇಷ ನೆರವನ್ನು ಬಿಡುಗಡೆ ಮಾಡಬೇಕು. ಮತ್ತೊಂದು ಇಲ್ಲಿಯವರೆಗೆ ದಕ್ಷಿಣ ಭಾರತದ ಮೇಲಿನ ಅನ್ಯಾಯವನ್ನು ಮುಂದಿಟ್ಟು ಆ ರಾಜ್ಯಗಳನ್ನು ಒಟ್ಟು ಗೂಡಿಸುವ ಪ್ಲಾನ್ ಕೂಡ ಇದ್ದಂತಿದೆ.
ದಕ್ಷಿಣದ ಎಲ್ಲಾ ರಾಜ್ಯಗಳ ಗಮನವಷ್ಟೇ ಅಲ್ಲ ಉತ್ತರದ ರಾಜ್ಯಗಳ ಗಮನವೂ ಬುಧವಾರ ಪ್ರತಿಭಟನೆಯ ಕಡೆ ತಿರುಗಲಿದೆ. ಇಲ್ಲಿಯವರೆಗೆ ಕೇಂದ್ರದಿಂದ ಪದೇ ಪದೇ ಅನ್ಯಾಯದ ಆರೋಪ ಕೇಳಿ ಬಂದ್ರೂ ರಾಜ್ಯಗಳು ಪ್ರತಿಭಟನೆಯ ಹಾದಿ ಹಿಡಿದಿರಲಿಲ್ಲ. ಮಾಧ್ಯಮಗಳ ಮುಂದೆ ಧ್ವನಿ ಎತ್ತುವುದನ್ನ ಬಿಟ್ಟು ಬೇರೇನೂ ಮಾಡ್ತಿರಲಿಲ್ಲ. ಆದ್ರೆ ಇದೇ ಮೊದಲ ಬಾರಿಗೆ 135 ಕೈ ಶಾಸಕರು, 31 ಪರಿಷತ್ ಸದಸ್ಯರು, ಮೂವರು ರಾಜ್ಯಸಭಾ ಸದಸ್ಯರು, ಸಂಸದರು ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ಕೇಂದ್ರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ದೆಹಲಿಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ವಿರುದ್ಧ ಶಕ್ತಿ ಪ್ರದರ್ಶನ ಮಾಡಲಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಹಲವು ಲೆಕ್ಕಾಚಾರಗಳನ್ನ ಇಟ್ಟುಕೊಂಡೇ ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ. ದೆಹಲಿ ಪ್ರತಿಭಟನೆ ಮೂಲಕ ದಕ್ಷಿಣ ರಾಜ್ಯಗಳ ಗಮನ ಸೆಳೆಯುವುದು ಮಾತ್ರ ಅಲ್ಲ, ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುವ ಉದ್ದೇಶ ಹೊಂದಲಾಗಿದೆ. ಎಷ್ಟರ ಮಟ್ಟಿಗೆ ಕಾಂಗ್ರೆಸ್ ಸರ್ಕಾರದ ದಿಲ್ಲಿ ಚಲೋ ಫಲ ನೀಡುತ್ತೆ ಎಂಬುದು ಮುಂದಿನ ದಿನಗಳಲ್ಲಿ ಗೋಚರಿಸಲಿದೆ.
ಇದನ್ನೂ ಓದಿ: 'ದೆಹಲಿಗೆ ಯಾತ್ರೆ ಹೊರಟಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ' : ಹೆಚ್ಡಿಕೆ ಕಿಡಿ