ಧಾರವಾಡ : ಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವಿರೋಧ ವ್ಯಕ್ತಪಡಿಸಿದೆ. ವೀರಶೈವ ಮಹಾಸಭಾದ ಈಶ್ವರ ಚಂದ್ರ ಹೊಸಮನಿ, ವೀರಣ್ಣ ಎಳಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಲಿಂಗಾಯತ ಸಮಾಜಕ್ಕೆ ಟಿಕೆಟ್ ನೀಡಬೇಕಿತ್ತು. ದಿಂಗಾಲೇಶ್ವರ ಶ್ರೀಗಳ ಬೆಂಬಲಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ವೀರಶೈವ ಲಿಂಗಾಯತ ಮಹಾ ಸಮೂಹ ಇದೆ. ಜಿಲ್ಲೆಯಲ್ಲಿ 6 ಲಕ್ಷ ಜನಸಂಖ್ಯೆ ಇದೆ. 25 ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡಿದರೂ ಏನೂ ಅಭಿವೃದ್ಧಿ ಆಗಿಲ್ಲ. ನಾವು ಮಹಾಸಭೆ ಹುಟ್ಟು ಹಾಕಿದ್ದೇವೆ. ನಾವು ರಾಜ್ಯದಲ್ಲಿ 45 ರಷ್ಟು ಇದ್ದೇವೆ. ಇಲ್ಲಿ ಲೋಕಸಭಾ ಚುನಾವಣೆಗೆ ಸುಮಾರು ವರ್ಷಗಳಿಂದ ಆ ಜಾಗಕ್ಕೆ ಯಾವುದೇ ಲಿಂಗಾಯತ ವ್ಯಕ್ತಿ ಗುರುತಿಸಿಲ್ಲ. ಸಮಾಜದ ಒಂದು ಕಳಕಳಿ, ನಾವು ನಮ್ಮ ಲಿಂಗಾಯತ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಡಿ ಎಂದು ಬೇಡಿಕೆ ಇಟ್ಟಿದ್ದೇವೆ. ದಿಂಗಾಲೇಶ್ವರ ಶ್ರೀಗಳು ಮಠಾಧೀಶರ ಜೊತೆ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಬೆಂಬಲಕ್ಕೆ ನಿಲ್ಲುತ್ತಿದ್ದು, ಸ್ವಾಮೀಜಿ ಧ್ವನಿಗೆ ಧ್ವನಿಗೂಡಿಸುತ್ತಿದ್ದೇವೆ ಎಂದರು.
ನಮಗೆ ಲಿಂಗಾಯತ ಅಭ್ಯರ್ಥಿ ಬೇಕು. ನಾವು ಪಕ್ಷ ಎಂದು ಹೋಗುತ್ತಿಲ್ಲ. ಅಭಿವೃದ್ಧಿಗಾಗಿ ನಾವು ಮಾಡುತ್ತಿದ್ದೇವೆ. ಬಿಜೆಪಿಗೆ ನಾವು ಒತ್ತಾಯ ಮಾಡುತ್ತೇವೆ. ಜೋಶಿ ಅವರಿಗೆ ಟಿಕೆಟ್ ವಿರೋಧ ಮಾಡುತ್ತೇವೆ. 31ಕ್ಕೆ ನಾವು ತೀರ್ಮಾನ ಮಾಡ್ತೇವೆ. ಸ್ವಾಮೀಜಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿದ್ದು, ಇಡೀ ಲಿಂಗಾಯತ ಸಮುದಾಯ ದಿಂಗಾಲೇಶ್ವರರಿಗೆ ಬೆಂಬಲ ನೀಡುತ್ತಿದ್ದೇವೆ. ನಮ್ಮ ಜಿಲ್ಲಾ ಹಾಗೂ ರಾಜ್ಯ ಪದಾಧಿಕಾರಿಗಳಿಂದ ಬೆಂಬಲ ನೀಡುತ್ತೇವೆ ಎಂದು ಸ್ವಾಮೀಜಿ ಪರ ಬ್ಯಾಟ್ ಬೀಸಿದರು.
ಇದು ನಮ್ಮ ಸಮಾಜದ ಧ್ವನಿ. ನಮ್ಮ ಸಮಾಜ ತುಳಿತಕ್ಕೆ ಒಳಗಾಗುತ್ತಿದೆ. ಪ್ರಮುಖ ಘಟ್ಟ ಎಂದರೆ ಕೆಲಸ. ಆ ಕೆಲಸ ಆಗಬೇಕಾದರೆ ಅಭಿವೃದ್ಧಿ ಆಗಬೇಕು. ಆದರೆ, ಅದು ಆಗಲಿಲ್ಲ. ಕೆಲಸನೇ ಆಗಿಲ್ಲ. ನಮ್ಮ ಅಭ್ಯರ್ಥಿಯಾದರೆ ಸಮಾಜ ಕಟ್ಟಿ ಅಭಿವೃದ್ಧಿ ಮಾಡಬಹುದು. ಇದು ನಮ್ಮ ಕಳಕಳಿ. ದಿಂಗಾಲೇಶ್ವರ ಸ್ವಾಮೀಜಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ನಮಗೆ ಕಣ್ಣು ತೆರೆಸುವ ಕೆಲಸ ಸ್ವಾಮೀಜಿ ಮಾಡಿದ್ದಾರೆ. ಎಲ್ಲ ಸ್ವಾಮೀಜಿಗಳು ಮಠ ಬಿಟ್ಟು ಹೊರ ಬಂದಿದ್ದಾರೆ. ಅವರು ತೋರಿಸಿದ ದಾರಿಯಲ್ಲಿ ಹೋಗುತ್ತೇವೆ. ನಮಗೆ ಎಲ್ಲಾ ಬೆನಿಫಿಟ್ ಸಿಗಲೆಂದು ನಾವು ಇದನ್ನು ಮಾಡುತ್ತಿದ್ದೇವೆ. ಸ್ವಾಮೀಜಿಯವರ ಮಾತಿಗೆ ನಾವೆಲ್ಲ ಬದ್ಧ. ಸ್ವಾಮೀಜಿ ಮಾತಿಗೆ ಎಲ್ಲದಕ್ಕೂ ಬೆಂಬಲ ಕೊಡುತ್ತೇವೆ ಎಂದರು.