ಮಂಗಳೂರು: ಉದ್ಯಮಿಗಳು ರಾಷ್ಟ್ರದ ವಿವಿಧ ಬ್ಯಾಂಕ್ಗಳಿಗೆ 4 ಲಕ್ಷ ಕೋಟಿ ರೂ ವಂಚಿಸಿದ್ದು, ಇವರ ಹೆಸರನ್ನು ಕೇಂದ್ರ ಸರಕಾರ ಬಹಿರಂಗಪಡಿಸಬೇಕು ಎಂದು ಎಐಬಿಇಎ (ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ) ರಾಷ್ಟ್ರೀಯ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಆಗ್ರಹಿಸಿದರು.
ಮಂಗಳೂರಿನಲ್ಲಿ ಇಂದು ಮಾತನಾಡಿದ ಅವರು, "ನಾಲ್ಕು ಲಕ್ಷ ಕೋಟಿ ಹಣ ಬಾಕಿ ಇದೆ ಎಂದು ಸಂಸತ್ತಿಗೆ ಸರಕಾರ ಹೇಳಿದೆ. ಕಳೆದ 10 ವರ್ಷದಲ್ಲಿ ಇಷ್ಟು ಹಣ ವಂಚಿಸಲಾಗಿದೆ. ವಂಚಕರ ಹೆಸರನ್ನು ಬಹಿರಂಗಪಡಿಸುವಂತೆ ನಾವು ಆಗ್ರಹಿಸುತ್ತಿದ್ದೇವೆ" ಎಂದರು.
"ಎಲ್ಲವನ್ನು ಇಂದು ಬಹಿರಂಗಪಡಿಸುತ್ತಿರುವಾಗ ಬ್ಯಾಂಕಿಗೆ ವಂಚಿಸಿದವರ ಉದ್ಯಮಿಗಳ ಹೆಸರನ್ನು ಯಾಕೆ ಬಹಿರಂಗಪಡಿಸುತ್ತಿಲ್ಲ?. ಮಲ್ಯ, ಅನಿಲ್ ಅಂಬಾನಿ ಸೇರಿದಂತೆ ಹಲವು ಉದ್ಯಮಿಗಳು ಬ್ಯಾಂಕ್ಗೆ ವಂಚಿಸಿದ್ದಾರೆ. ಗೋಲ್ಡ್ ಲೋನ್ ಬಾಕಿ ಇರಿಸಿದ ಸಾಮಾನ್ಯ ಜನರ ವಿವರಗಳನ್ನು ಫೋಟೋಸಮೇತ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಆದರೆ ಬ್ಯಾಂಕಿಗೆ ವಂಚಿಸಿದ ಉದ್ಯಮಿಗಳ ಹೆಸರನ್ನು ಪ್ರಕಟಿಸುತ್ತಿಲ್ಲ ಯಾಕೆ? ಮಲ್ಯ, ಅನಿಲ್ ಅಂಬಾನಿ ಈಗಲೂ ಶ್ರೀಮಂತರು. ಅವರ ಹಣ ಯಾಕೆ ವಾಪಸ್ ಬರುತ್ತಿಲ್ಲ" ಎಂದು ಪ್ರಶ್ನಿಸಿದರು.
"ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೇ 75-80 ಸಾವಿರದಷ್ಟು ಹುದ್ದೆಗಳು ಖಾಲಿಯಿವೆ. ಖಾಸಗಿ ಬ್ಯಾಂಕ್‌ಗಳಲ್ಲೂ ಹುದ್ದೆಗಳು ಖಾಲಿಯಿವೆ. ಇಷ್ಟು ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿಯಿದ್ದರೂ, ಅದನ್ನು ಭರ್ತಿ ಮಾಡದೆ ಔಟ್ ಸೋರ್ಸಿಂಗ್ ಮೂಲಕ 10-15 ಸಾವಿರ ಸಂಬಳಕ್ಕೆ ಉದ್ಯೋಗಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಭೀಕರವಾಗಿ ತಾಂಡವವಾಡುತ್ತಿದ್ದರೂ, ಹುದ್ದೆ ಭರ್ತಿ ಮಾಡಲು ಏನಡ್ಡಿ?. ಆದ್ದರಿಂದ 1ಲಕ್ಷ ಹುದ್ದೆಗಳನ್ನು ಈ ತಕ್ಷಣ ಭರ್ತಿ ಮಾಡಬೇಕು. ಈ ಕುರಿತು ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆ ಆಯೋಜಿಸುತ್ತೇವೆ" ಎಂದು ಎಚ್ಚರಿಸಿದರು.
"ಹಿಂದೆ ಫ್ರೀ ಇದ್ದ ಬ್ಯಾಂಕ್ ಸೇವಾ ಶುಲ್ಕಗಳು ಇದೀಗ ವಿಪರೀತ ಏರಿಕೆಯಾಗಿವೆ. ಇದರಿಂದ ಬಡವರಿಗೆ ಹೊರೆಯಾಗುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳು ಪಡೆದ ಸಾಲ ಹಿಂತಿರುಗಿಸದೆ ಬ್ಯಾಂಕ್‌ಗಳ ಆದಾಯ ಕಡಿಮೆ ಆಗಿರುವುದೇ ಇದಕ್ಕೆ ಕಾರಣ. ಮೊದಲು ಕಾರ್ಪೊರೇಟ್ ಸಂಸ್ಥೆಗಳಿಂದ ಸಾಲ ವಸೂಲಿ ಮಾಡಬೇಕು, ಸಾಲ ಮರುಪಾವತಿ ಮಾಡುವಷ್ಟು ಹಣ ಅವರಲ್ಲಿದೆ. ಈಗಲೂ ದೇಶ ವಿದೇಶಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ" ಎಂದು ವೆಂಕಟಾಚಲಂ ಆರೋಪಿಸಿದರು.
ಇದನ್ನೂ ಓದಿ: ಮುಖ್ಯಮಂತ್ರಿಗಳನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿ; ಸ್ನೇಹಮಯಿ ಕೃಷ್ಣ ಮನವಿ