ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿನಿಧಿಸುತ್ತಿರುವ ಶಿರಾಳಕೊಪ್ಪ ಪುರಸಭೆಗೆ ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಳೆದ 25 ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿದ್ದ ಶಿರಾಳಕೊಪ್ಪ ಈಗ ಕಾಂಗ್ರೆಸ್ ಪಾಲಾಗಿದೆ. ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಮಮತಾ ಅವರು ಅಧ್ಯಕ್ಷರಾಗಿ ಹಾಗೂ ಮುದಾಸೀರ್ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ 25 ವರ್ಷದಲ್ಲಿ ಕೇವಲ 12 ತಿಂಗಳು ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿತ್ತು. ಈಗ ಮತ್ತೆ ಪುರಸಭೆ ಗದ್ದಿಗೆಗೆ ಏರಿದ್ದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹರ್ಷವನ್ನುಂಟು ಮಾಡಿದೆ. ಚುನಾವಣಾ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಯತೀಶ್ ನಡೆಸಿಕೊಟ್ಟರು. ಶಿರಾಳಕೊಪ್ಪ ಪುರಸಭೆಯು ಒಟ್ಟು 16 ಸ್ಥಾನವನ್ನು ಹೊಂದಿದೆ. ಇಂದಿನ ಚುನಾವಣಾ ಪ್ರಕ್ರಿಯೆಯಲ್ಲಿ ಕಳೆದ ಭಾರಿ ಅಧಿಕಾರ ನಡೆಸಿದ ಮಂಜುಳಮ್ಮ ಹಾಗೂ ಟಿ.ರಾಜು ಅವರು ಗೈರಾಗಿದ್ದರು.
ಶಿಕಾರಿಪುರ ಪುರಸಭೆ ಬಿಜೆಪಿ ತೆಕ್ಕೆಗೆ: ಶಿಕಾರಿಪುರ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶೈಲಾ ಯೋಗೀಶ್ ಹಾಗೂ ಉಪಾಧ್ಯಕ್ಷರಾಗಿ ರೂಪಾ ಮಂಜುನಾಥ್ ಅವರು ಆಯ್ಕೆಯಾಗಿದ್ದಾರೆ. ಶಿಕಾರಿಪುರ ಪುರಸಭೆಯು ಒಟ್ಟು 23 ಸದಸ್ಯ ಬಲವನ್ನು ಹೊಂದಿದೆ. ಕಾಂಗ್ರೆಸ್ ಓರ್ವ ಸದಸ್ಯ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ 14 ಬಿಜೆಪಿ ಹಾಗೂ 8 ಕಾಂಗ್ರೆಸ್ ಸದಸ್ಯರನ್ನು ಒಳಗೊಂಡಿದೆ. ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ, ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ತಾಲೂಕು ಪಧಾಧಿಕಾರಿಗಳಿದ್ದರು.
ಇದನ್ನೂ ಓದಿ: ಸಾಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆ: ಯಾಕೆ ಗೊತ್ತಾ? - Sagara Municipal Council