ದಾವಣಗೆರೆ: ಮಾಸಾಶನ ಪ್ರಮಾಣ ಪತ್ರ ಮಾಡಿಸಲು ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಕುಂಕುವ ಗ್ರಾಮದ ಆಡಳಿತಾಧಿಕಾರಿ ಗಣೇಶ್ ಕೆ.ಜಿ. ಬಂಧಿತ ಆರೋಪಿ.
ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುಂಕುವ ಗ್ರಾಮದ ನಿವಾಸಿ ಹರ್ಷ ಎಂಬವರು ವಿಕಲಾಂಗರಾಗಿದ್ದು, ಮಾಸಾಶನ ಪ್ರಮಾಣ ಮಾಡಿಸಲು ನ್ಯಾಮತಿ ನಾಡ ಕಛೇರಿಗೆ ಅರ್ಜಿ ಸಲ್ಲಿಸಿದ್ದರು. ಗಣೇಶ್ ಕೆ.ಜಿ. ಈ ಅರ್ಜಿಯನ್ನು ಮುಂದುವರೆಸಲು 6 ಸಾವಿರೂ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ, ₹5,000ಕ್ಕೆ ಒಪ್ಪಿ ಹಣ ಹೊಂದಿಸಿಕೊಂಡು ಬರುವಂತೆ ತಿಳಿಸಿದ್ದರು. ಈ ಕುರಿತು ಹರ್ಷ ಅವರ ಸಹೋದರ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿತ್ತು. ಗಣೇಶ್ ಅವರು ಬಸವನಹಳ್ಳಿ ಗ್ರಾಮದ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಲಂಚದ ಹಣ ಪಡೆಯುವಾಗ ಟ್ರ್ಯಾಪ್ ಮಾಡಿ, ಬಂಧಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಕಲಾವತಿ ಕೆ., ಪೊಲೀಸ್ ನಿರೀಕ್ಷಕರಾದ ಹೆಚ್.ಎಸ್.ರಾಷ್ಟ್ರಪತಿ ಮತ್ತು ಮಧುಸೂದನ್ ಸಿ. ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇದನ್ನೂ ಓದಿ: ಬಳ್ಳಾರಿ ಶಾಸಕ ಭರತ್ ರೆಡ್ಡಿ ಮನೆ ಸೇರಿದಂತೆ 4 ಕಡೆ ಇಡಿ ಅಧಿಕಾರಿಗಳ ದಾಳಿ