ಬೆಂಗಳೂರು: "ನಾನು ದರ್ಶನ್ ಅವರನ್ನು ನನ್ನ ಮಗನಾಗಿ ನೋಡಿದ್ದೇನೆ. ಓರ್ವ ತಾಯಿಯಾಗಿ ನನ್ನ ಮಗ ಈ ರೀತಿ ಮಾಡುವುದಿಲ್ಲ ಎಂದು ನನಗನಿಸುತ್ತಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದು ಹಿರಿಯ ನಟಿ ಹಾಗು ಮಾಜಿ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಅರಮನೆ ಮೈದಾನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ಪೊಲೀಸ್ ಮತ್ತು ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಕಾನೂನು ಪ್ರಕಾರ, ಏನೇನು ಕ್ರಮಗಳಾಗಬೇಕೋ, ಆಗಲಿ. ಅಲ್ಲಿಯವರೆಗೂ ಕಾಯುತ್ತೇನೆ" ಎಂದರು.
"ಇಷ್ಟು ದಿನ ನಾನು ಮಾತನಾಡದೇ ಇರುವುದು ಮತ್ತು ಇಂದು ಪೋಸ್ಟ್ ಮಾಡಿದ್ದಕ್ಕೂ ಬಹಳ ಸ್ಪಷ್ಟವಾಗಿ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ನಾನು ಏನೇ ಮಾತನಾಡಿದರೂ ಅದು ನನ್ನ ವೈಯಕ್ತಿಕ ವಿಷಯ. ನಟಿಯಾಗಿ, ಪಕ್ಷದ ಸದಸ್ಯೆಯಾಗಿ ಮಾತನಾಡಿಲ್ಲ. ವೈಯಕ್ತಿಕವಾಗಿ ಮಾತನಾಡಿದ್ದೇನೆ. ಯಾವುದೇ ಮನೆಯಲ್ಲಿ ಈ ರೀತಿ ಘಟನೆಗಳು ನಡೆದಾಗ ಯಾರೂ ಕೂಡ ಮಾಧ್ಯಮಗಳ ಮುಂದೆ ಬಂದು ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಮಾತನಾಡುವ ಮನಸ್ಥಿತಿಯಲ್ಲಿ ಇರುವುದಿಲ್ಲ" ಎಂದು ಹೇಳಿದರು.
ಶಾಕ್ನಲ್ಲಿದ್ದೇವೆ: "ದರ್ಶನ್ ಅವರ ತಾಯಿ, ತಮ್ಮ, ಪತ್ನಿ ನೊಂದಿದ್ದಾರೆ. ದರ್ಶನ್ ಪತ್ನಿ ಜೊತೆ ನಾನು ಮೊದಲಿನಿಂದಲೂ ಸಂಪರ್ಕದಲ್ಲಿದ್ದೇನೆ. ಇವುಗಳೆಲ್ಲವೂ ವೈಯಕ್ತಿಕ ವಿಚಾರಗಳಾಗಿರುವುದರಿಂದ ನಾವೆಲ್ಲರೂ ಶಾಕ್ನಲ್ಲಿ ಇದ್ದೇವೆ, ನೋವಿನಲ್ಲಿದ್ದೇವೆ. ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಹಾಗಾಗಿ ಒಂದು ಸ್ಪಷ್ಟೀಕರಣ ನೀಡೋಣ, ನನ್ನ ನಿಲುವು, ಅನಿಸಿಕೆ ಏನು ಎನ್ನುವ ಕುರಿತು ಮಾಹಿತಿ ಹಂಚಿಕೊಂಡಿದ್ದೇನೆ" ಎಂದು ಸುಮಲತಾ ವಿವರಿಸಿದರು.
ಸಹಾಯ ಮಾಡುವ ಸ್ವಭಾವ: "ನಾನು ಕಂಡಿರುವ ದರ್ಶನ್ ಎಂದರೆ ಎಲ್ಲರಿಗೂ ಸಹಾಯ ಮಾಡುವ ಸ್ವಭಾವದವರು. ಅಂಬರೀಶ್ ಅಗಲಿಕೆಯ ನಂತರ ನನ್ನ ಪರವಾಗಿ ನಿಂತಿದ್ದರು. ಇದನ್ನು ಎಲ್ಲರೂ ನೋಡಿದ್ದಾರೆ. ನಾನು ಆ ರೀತಿಯ ದರ್ಶನ್‌ರನ್ನು ನೋಡಿದ್ದೇನೆ. ಬೇರೆ ರೀತಿಯ ವಿಚಾರಗಳು, ಅಭಿಪ್ರಾಯಗಳ ಬಗ್ಗೆ ಮಾತನಾಡುವ ಪರಿಸ್ಥಿತಿಯಲ್ಲಿ ನಾನಿಲ್ಲ. ಅದರ ಮಾಹಿತಿಯೂ ನನಗಿಲ್ಲ. ಇದು ಪೊಲೀಸ್ ಮತ್ತು ನ್ಯಾಯಾಲಯಕ್ಕೆ ಸೇರಿದ ವಿಷಯ. ಈಗ ಬಂದಿರುವ ಆರೋಪ ಸಾಬೀತಾಗಬೇಕು. ಆಗ ಅಪರಾಧಿಯಾಗುತ್ತಾರೆ. ಒಬ್ಬ ತಾಯಿಯಾಗಿ ನನ್ನ ಮಗ ಈ ರೀತಿ ಮಾಡಿರುವುದಿಲ್ಲ ಎಂದು ನನಗನಿಸುತ್ತಿದೆ" ಎಂದು ಪುನರುಚ್ಚರಿಸಿದರು.
"ದರ್ಶನ್ ಜಾಮೀನು ಅರ್ಜಿ ಸಲ್ಲಿಸಿಲ್ಲ. ಕಾನೂನು ವ್ಯವಸ್ಥೆಯಲ್ಲಿ ಒಂದಷ್ಟು ನಿಯಮಗಳಿವೆ. ಆರೋಪಪಟ್ಟಿ ಸಲ್ಲಿಸುವವರೆಗೂ ಇದಕ್ಕೆ ಅವಕಾಶವಿಲ್ಲ. ಈ ಮಾಹಿತಿ ಇರುವ ಕಾರಣಕ್ಕೆ ಕಾಯುತ್ತಿರಬಹುದು" ಎಂದರು.
ಇದನ್ನೂ ಓದಿ: ನಾನು ಬದುಕಿರುವವರೆಗೂ ದರ್ಶನ್ ನನ್ನ ಹಿರಿ ಮಗ: ಸುಮಲತಾ ಅಂಬರೀಷ್