ಮಂಗಳೂರು: ಫ್ರೆಂಡ್ಸ್ ಬಳ್ಳಾಲ್‌ಬಾಗ್ ಬಿರುವೆರ್ ಕುಡ್ಲ ಸಂಸ್ಥೆಯ ವತಿಯಿಂದ ನಗರದ ಬಳ್ಳಾಲ್‌ಬಾಗ್‌ನಲ್ಲಿ ನಡೆದ ಹುಲಿವೇಷದ ಊದುಪೂಜೆಯಲ್ಲಿ ಬಾಲಿವುಡ್ ನಟ ಸಂಜಯ್ ದತ್ ಭಾಗಿಯಾಗಿದ್ದರು. ಮತ್ತೊಂದೆಡೆ, ಕ್ರಿಕೆಟರ್ ಶಿವಂ ದುಬೆ ಪಿಲಿನಲಿಕೆ ಪ್ರತಿಷ್ಠಾನ ವತಿಯಿಂದ ನಡೆದ ಹುಲಿವೇಷ ಸ್ಪರ್ಧೆ ವೀಕ್ಷಿಸಿದರು.
ಮಂಗಳೂರು ದಸರಾ ಅದ್ಧೂರಿ ಮೆರವಣಿಗೆಗೆ ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ನೇತೃತ್ವದ ಹುಲಿವೇಷ ಕುಣಿತ ನಡೆಯುತ್ತದೆ. ಹುಲಿವೇಷಧಾರಿಗಳು ಬಣ್ಣ ಹಚ್ಚುವುದಕ್ಕಿಂತ ಮೊದಲು ಊದುಪೂಜೆ ನಡೆಯುತ್ತದೆ. ಈ ಬಾರಿ 10ನೇ ವರ್ಷದ ಹುಲಿವೇಷ ಕುಣಿತ ನಡೆಯಿತು.
ಸಂಜಯ್ ದತ್ ಅವರಿಗೆ ಹುಲಿವೇಷದ ತಲೆಯ ಪ್ರತಿಕೃತಿ ನೀಡಿ ಅಭಿನಂದಿಸಲಾಯಿತು. ಊದುಪೂಜೆಗಿಂತ ಮೊದಲು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹತ್ತು ಮಂದಿಯನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ನಡೆದ ಹುಲಿವೇಷ ಕಾರ್ಯಕ್ರಮದಲ್ಲಿ ನಟರಾದ ಡಾಲಿ ಧನಂಜಯ್, ಯಶ್ ಶೆಟ್ಟಿ, ನವೀನ್ ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ವೇಳೆ ಕ್ರಿಕೆಟಿಗ ಶಿವಂ ದುಬೆ ಸಭಿಕರನ್ನು ಉದ್ದೇಶಿಸಿ, "ಎಂಚ ಉಲ್ಲರ್?" (ಹೇಗೆ ಇದ್ದೀರಾ?) ಎಂದು ತುಳುವಿನಲ್ಲಿಯೇ ಮಾತು ಪ್ರಾರಂಭಿಸಿದರು. ಬಳಿಕ, "ನಾನು ಇಂತಹ ಒಂದು ದೃಶ್ಯವನ್ನು ಎಂದೂ ಕಂಡಿರಲಿಲ್ಲ. ನನಗೆ ಈ ಅನುಭವ ತೀರಾ ಹೊಸದು, ಆದರೂ ಬಹಳ ಇಷ್ಟವಾಯಿತು. ಕರಾವಳಿಯ ಹುಲಿವೇಷ ಕುಣಿತದ ತಾಸೆಯ ಸದ್ದು ಕೇಳಿ ಬಹಳ ಸಂತೋಷವಾಯಿತು. ಒಂದು ಕ್ಷಣಕ್ಕೆ ನನಗೆ ದೇವಸ್ಥಾನಕ್ಕೆ ಬಂದ ಅನುಭವವಾಯಿತು" ಎಂದರು.
ಇದನ್ನೂ ಓದಿ: ಅಂಬು ಛೇದನ ಮಾಡಿದ ತಹಶೀಲ್ದಾರ್ ಗಿರೀಶ್: ಶಿವಮೊಗ್ಗ ದಸರಾ ಸಂಪನ್ನ