ಬೆಳಗಾವಿ: ಮಹಾಪ್ರಭುವಿನ ದೊಂಬರಾಟದಲ್ಲಿ ಮಂಗಗಳು ಆಗೋದು ಜನಸಾಮಾನ್ಯರು. ಪ್ರತಿಯೊಂದನ್ನೂ ಪ್ರಶ್ನಿಸಬೇಕು. ಇಲ್ಲದಿದ್ದರೆ ನಿಮ್ಮ ಅಂತ್ಯವಾಗುತ್ತದೆ. ಪುಷ್ಪಕ ವಿಮಾನ, ಸಂವಿಧಾನ ಬದಲಿಸುವುದು, ಒಂದೇ ಪಕ್ಷ ಅಂತಾ ಅವರೆಲ್ಲಾ ಚೆನ್ನಾಗಿದ್ದಾರೆ. ಒಂದೇ ಭಾಷೆ, ಒಂದೇ ಪಕ್ಷ, ಒಂದೇ ಪ್ರಭುವಿನಂತಿರುವ ಈ ಮಹಾಪ್ರಭುವಿಗೆ ಎರಡು ನಾಲಿಗೆ ಎಂದು ನಟ ಪ್ರಕಾಶ್ರಾಜ್ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಗಾಂಧಿ ಭವನದಲ್ಲಿ ಜನಪರ ಚಳುವಳಿಗಳ ಮುಂದಾಳುಗಳು ಆಯೋಜಿಸಿದ್ದ ದೇಶಪ್ರೇಮಿ ಶಕ್ತಿಗಳ ಸಂಕಲ್ಪ ಸಮಾವೇಶ, ದೇಶ ಉಳಿಸಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಳಗಾವಿ ಜನ ವಿಚಾರ ಮಾಡಿ. ಸ್ಮಾರ್ಟ್ ಸಿಟಿ ಎಂದರು, ಎಲ್ಲಿ ಆಗಿದೆ ಸ್ಮಾರ್ಟ್?. ಪ್ರತಿ ಸಂಸದರು ಒಂದು ಹಳ್ಳಿ ದತ್ತು ತೆಗೆದುಕೊಂಡು ಮಾದರಿ ಮಾಡಬೇಕೆಂದು ಹೇಳಿ ಹತ್ತು ವರ್ಷ ಆಗಿದೆ. ಒಂದಾದ್ರೂ ಹಳ್ಳಿ ಮಾದರಿ ಆಗಿದೆಯಾ ಎಂದು ಪ್ರಶ್ನಿಸಿದರು.
ಕರ್ನಾಟಕಕ್ಕೆ ನಮ್ಮ ನಾಯಕ ಬೇಕು. ಅಲ್ಲಿ ಯಾರೋ ಕುಳಿತವನ ಮುಖ ನೋಡಿ ಮತ ಹಾಕೋದಲ್ಲ. ನಿಮ್ಮ ಪ್ರತಿನಿಧಿಗೆ ಹಾಕಬೇಕು. ನಿಮ್ಮ ನೋವು, ಮಾತು, ಭಾಷೆ, ಸಮಸ್ಯೆ ತೆಗೆದುಕೊಂಡು ಪಾರ್ಲಿಮೆಂಟ್ ಹೋಗುವ ಅಭ್ಯರ್ಥಿಗೆ ಮತ ಹಾಕಬೇಕು. ಅವರ ಮುಖ ನೋಡಿ ವೋಟ್ ಹಾಕಿದರೆ ಕಂಗನಾ ರಣಾವತ್ಗೆ ವೋಟ್ ಹಾಕಿದಂತೆ ಆಗುತ್ತದೆ. ಅವರು ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಎಂದಿದ್ದಾರೆ, ಇಂಥವರಿಗೆ ಮತ ಹಾಕಿದರೆ ದೇಶ ಉದ್ಧಾರ ಆಗುತ್ತಾ?. ಮುಂದಿನ ಪೀಳಿಗೆ ಬದುಕಲು ಸರಿಯಾದ ಪ್ರತಿನಿಧಿಗೆ ಮತ ನೀಡಿ ಆರಿಸಿರಿ. ನಿಜವಾದ ದೇಶಭಕ್ತರಾದರೆ, ಮನುಷ್ಯರಾದರೆ ಈ ಸರ್ವಾಧಿಕಾರಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಟೀಕಾಪ್ರಹಾರ ನಡೆಸಿದರು.
ಏರ್ಪೋರ್ಟ್ ಬದಲಾಗಿಲ್ಲ. ಅದಾನಿ ಕೈ ಬದಲಾಗಿದೆ. ಏರ್ಪೋರ್ಟ್ನಲ್ಲಿ ಒಂದು ಚಹಾಗೆ 300 ರೂ.. ಇದು ಸರ್ಕಾರಕ್ಕೆ ಹೋಗೋದಿಲ್ಲ. ಮೋದಿ ಸ್ನೇಹಿತ ಅದಾನಿಗೆ ಹೋಗುತ್ತದೆ. ಟೋಲ್ ಗೇಟ್ ಮಾಫಿಯಾ ದೊಡ್ಡದಿದೆ. ಪೆಟ್ರೋಲ್ ದರ ಹೆಚ್ಚಾಗಿದೆ. ಇದು ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಒಂದು ಕಾಲದಲ್ಲಿ ದೇಶದ ಸ್ವಾತಂತ್ರ್ಯಕ್ಕೆ ನಾಯಕರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಆದರೆ, ಈಗ ದೇವಸ್ಥಾನ ಉದ್ಘಾಟನೆಗೆ ಉಪವಾಸ ಮಾಡುವವರನ್ನು ನೋಡುತ್ತಿದ್ದೇವೆ. ಇಂಥ ನಾಯಕ ನಮಗೆ ಬೇಕಾ?. ಅಬ್ ಕಿ ಬಾರಿ ಚಾರ್ ಸೋ ಬಾರ್ ಅಲ್ಲ. ಮಹಾಪ್ರಭು ಒಳಗೆ ಕುಳಿತುಕೊಂಡು ಚಾರ್ ಸೋ ಬಾರ್ ಆಗೋದಿಲ್ಲ. ಎಲೆಕ್ಟೊರಲ್ ಬಾಂಡ್ ಮೂಲಕ ದುಡ್ಡು ಸೇರಿಸಿದ್ದರು. ಆ ದುಡ್ಡಿನಿಂದ ಎಂಎಲ್ಎ ಕೊಂಡೊಕೊಳ್ಳೋಕಾ?. ಗಲಭೆ ಸೃಷ್ಟಿಸೋದಿಕ್ಕಾ? ಮೆರವಣಿಗೆ ಮಾಡಿಸಿಕೊಳ್ಳೋಕಾ?. ದುಡ್ಡು ಕೊಟ್ಟು ವೋಟ್ ತೆಗೆದುಕೊಳ್ಳೋಕಾ ಎಂದು ಪ್ರಶ್ನಿಸಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ, ಜನರಿಗೆ ಅಚ್ಛೇ ದಿನದ ಕನಸು ತೋರಿಸಿ ಅಧಿಕಾರಕ್ಕೆ ಬಂದು ಹಾಡಹಗಲು ಜನರ ಸುಲಿಗೆಗೆ ನಿಂತಿದೆ. ಸೆಸ್ ಮತ್ತು ಜಿಎಸ್ಟಿ ಹಾಕಿ. ಪೆಟ್ರೋಲಿನಿಂದ ಹಿಡಿದು ಗುಂಡು ಪಿನ್ನಿನ ತನಕ ಪ್ರತಿಯೊಂದರ ಬೆಲೆ ಏರಿಸಿ, ಸಾಮಾನ್ಯರ ದುಡಿಮೆಯನ್ನೆಲ್ಲಾ ದೋಚುತ್ತಿದ್ದಾರೆ. ಈ ಪಿತೂರಿಯಲ್ಲಿ ಕೈಮಿಲಾಯಿಸಿರುವ ಕಂಪನಿಗಳಿಗೆ ದೇಶದ ಕೊಳ್ಳೆ ಹೊಡೆಯಲು ಮುಕ್ತ ಪರವಾನಗಿ ನೀಡಲಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಮಾಫಿಯಾ ಗ್ಯಾಂಗ್ ಆಗಿ ಪರಿವರ್ತನೆಯಾಗಿದೆ. ಚುನಾವಣಾ ಬಾಂಡ್ ಹೆಸರಿನಲ್ಲಿ ಹಫ್ತಾ ವಸೂಲಿ ನಡಿಯುತ್ತಿದೆ. ದೇಶ ತುಂಡು ತುಂಡಾಗಿ ಮಾರಾಟವಾಗುತ್ತಿದೆ. ಅಕ್ರಮ ವ್ಯವಹಾರಗಳು ಮುಕ್ತ ಲೈಸೆನ್ಸ್ ಪಡೆದುಕೊಂಡಿವೆ. ದೇಶ ಕಾಯಬೇಕಿದ್ದ ಸಿಬಿಐ, ಐಟಿ, ಇಡಿ ಮುಂತಾದ ಸಂಸ್ಥೆಗಳು ಗೂಂಡಾಗಿರಿ ಹಾಗೂ ವಸೂಲಿ ದಂಧೆಗೆ ಇಳಿದುಬಿಟ್ಟಿವೆ ಎಂದು ಆರೋಪಿಸಿದರು.
ಸಾಮಾಜಿಕ ಮತ್ತು ಮಹಿಳಾ ಹೋರಾಟಗಾರ್ತಿ ಡಾ.ಬಿ.ಟಿ.ಲಲಿತಾ ನಾಯ್ಕ ಮಾತನಾಡಿ, ಸಮಾಜಕ್ಕಾಗಿ ದುಡಿದವರು ಅಲ್ಪಜನರು ದೇಶವನ್ನು ಹಾಳು ಮಾಡುತ್ತಿರುವವರು ಸಹಸ್ರಾರು ಜನರು, ಮೂಢನಂಬಿಕೆಯಲ್ಲಿ ಜನರು ಮಗ್ನರಾಗಿದ್ದಾರೆ. ಮೌಢ್ಯತೆ, ಗುಲಾಮಗಿರಿಯನ್ನು ಬುಡಸಮೇತ ಕಿತ್ತುಹಾಕಬೇಕು. ಹೀಗಾಗಿ ಜನರು ಒಂದಾಗಿ ಕಾಂಗ್ರೆಸ್ ಬೆಂಬಲಿಸಬೇಕು. ದೇಶದ ಸ್ಥಿತಿ ಅಫಾತದಲ್ಲಿದ್ದು, ದೇಶ ಮತ್ತು ಪ್ರಜಾಪ್ರಭುತ್ವ ಉಳಿಸಬೇಕಿದೆ ಎಂದರು.
ಪರಿಸರ ಪ್ರೇಮಿ ಶಿವಾಜಿ ಕಾಗನೇಕರ್, ಸಾಹಿತಿಗಳಾದ ರಂಜಾನ್ ದರ್ಗಾ, ರೈತ ಮುಖಂಡ ಬಡಗಲಪುರ ನಾಗೇಂದ್ರ, ಯೂಸೂಫ್ ಕನ್ನಿ ಮತ್ತಿತರರು ಇದ್ದರು.