ಮೈಸೂರು: ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಗುರುವಾರ ಮೈಸೂರಿನ ಅರ್ಜುನ ಅವಧೂತರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.
ತಮ್ಮ ಮುಂದಿನ ಬಹುನಿರೀಕ್ಷಿತ 'ಮಾರ್ಟಿನ್' ಯಶಸ್ವಿಯಾಗಲೆಂದು ಧ್ರುವ ಸರ್ಜಾ ಮೈಸೂರಿನ ಸೋನಾರ್ ಬೀದಿಯಲ್ಲಿರುವ ಅರ್ಜುನ ಅವಧೂತರ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭ ನಟನಿಗೆ ಅವಧೂತರು ಆಶೀರ್ವಾದ ಮಾಡಿದರು. ಚಿತ್ರ ಯಶಸ್ವಿಯಾಗಲೆಂದು ಅವಧೂತರು ದೇವರ ಪೂಜೆ ನಡೆಸಿ, ಶಾಲು ಹೊದಿಸಿ, ಹಾರ ಮತ್ತು ಮೈಸೂರು ಪೇಟ ತೊಡಿಸಿದರು. ಅಲ್ಲದೆ, ಸಿಹಿ ನೀಡಿ ಆಶೀರ್ವಾದ ಮಾಡಿದರು.
'ಮಾರ್ಟಿನ್' ಟೈಟಲ್ ಹಾಗು ಟ್ರೇಲರ್ನಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿರೋ ಬಹುನಿರೀಕ್ಷಿತ ಚಿತ್ರ. ಆ್ಯಕ್ಷನ್ ಪ್ರಿನ್ಸ್ ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರ ದೇಶಾದ್ಯಂತ ಅಕ್ಟೋಬರ್ 11ಕ್ಕೆ ಬಿಡುಗಡೆ ಆಗಲಿದೆ. ಈ ಹಿನ್ನೆಲೆ ನಾಯಕ ನಟ ಚಿತ್ರದ ಯಶಸ್ಸಿಗಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಈ ಮಧ್ಯೆ ಧ್ರುವ ಸರ್ಜಾ ಮೈಸೂರಿನಲ್ಲಿ ಅರ್ಜುನ ಅವಧೂತರನ್ನು ಭೇಟಿ ಮಾಡಿದ್ದಾರೆ.
ಧ್ರುವ ಸರ್ಜಾ ಆಪ್ತರು ಹೇಳುವಾಗೆ, ''ಧ್ರುವ ಸರ್ಜಾ ಸಿನಿಮಾ ಬಂದು ಎರಡು ವರ್ಷಗಳಾಗುತ್ತಿವೆ. ಹಾಗಾಗಿ ಮಾರ್ಟಿನ್ ಸಿನಿಮಾ ಬರೋಬ್ಬರಿ 12 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಸಕ್ಸಸ್ಗಾಗಿ ಪಣ ತೊಟ್ಟಿರುವ ಕಾರಣ ಪ್ರಸಿದ್ಧ ಅರ್ಜುನ ಅವಧೂತರನ್ನು ಮೈಸೂರಿನಲ್ಲಿ ಭೇಟಿ ಮಾಡಿ ಚಿತ್ರದ ಯಶಸ್ಸಿಗಾಗಿ ಆರ್ಶೀವಾದ ಪಡೆದುಕೊಂಡಿದ್ದಾರೆ'' ಎಂದು ತಿಳಿಸಿದರು.
ಸದ್ಯ ಅನಾವರಗೊಂಡಿರುವ ಮಾರ್ಟಿನ್ ಟ್ರೇಲರ್ನಿಂದ ಇದೊಂದು ಔಟ್ ಅಂಡ್ ಔಟ್ ಸಾಹಸಮಯ ಚಿತ್ರ ಅನ್ನೋದು ಗೊತ್ತಾಗಿದೆ. ಇದರ ಜೊತೆಗೆ ದೇಶ ಪ್ರೇಮ, ಒಂದು ಮುದ್ದಾದ ಲವ್ ಸ್ಟೋರಿ ಹಾಗೂ ಫ್ಯಾಮಿಲಿ ಸ್ಟೋರಿ ಕೂಡಾ ಇರಲಿದೆ.
ಇದನ್ನೂ ಓದಿ: ನಟನೆ ಜೊತೆಗೆ ನಿರ್ದೇಶನಕ್ಕಿಳಿದ ಚಂದನ್ ಕುಮಾರ್: 'ಫ್ಲರ್ಟ್' ಸ್ಟೋರಿ ಹೇಳಲಿದ್ದಾರೆ ಪ್ರೇಮಬರಹ ಹೀರೋ - Chandan Kumar
ಧ್ರುವ ಸರ್ಜಾ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದು, ಅನ್ವೇಶಿ ಜೈನ್, ನಿಕಿತನ್ ಧೀರ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಬೆಂಗಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿದೆ. ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮಾ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಇದನ್ನೂ ಓದಿ: ನಟಿ ಮಲೈಕಾ ಅರೋರಾ ಮಲತಂದೆ ಆತ್ಮಹತ್ಯೆ: ಮರಣೋತ್ತರ ಪರೀಕ್ಷೆಯಲ್ಲೇನಿದೆ? - Malaika Stepfather Autopsy Report
ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಮಹೇಶ್‌ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ. ಉದಯ್ ಮೆಹ್ತಾ ಮಾರ್ಟಿನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕ ಉದಯ್ ಮೆಹ್ತಾ ಅವರು ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಿದ್ದು, ಅಕ್ಟೋಬರ್ 11ಕ್ಕೆ ಮಾರ್ಟಿನ್ ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದೆ.