ಬೆಂಗಳೂರು: ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರ ಪಾತ್ರದ ಕುರಿತು ತನಿಖೆ ನಡೆಯುತ್ತಿದ್ದು, ನಂತರವೇ ಸ್ಪಷ್ಟತೆ ಸಿಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೋರಮಂಗಲದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿಯಲ್ಲಿ ಇಂದು ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಚಿತ್ರದುರ್ಗದ ವ್ಯಕ್ತಿಯೊಬ್ಬರ ಹತ್ಯೆಯಾಗಿದೆ. ಪೊಲೀಸರ ತನಿಖೆಯಲ್ಲಿ ದರ್ಶನ್ ಹೆಸರು ಕೇಳಿ ಬಂದಿದೆ. ಹೀಗಾಗಿ ವಿಚಾರಣೆಗೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಪ್ರಕರಣದಲ್ಲಿ ಮೊದಲು ಬಂಧಿತರಾದ ಆರೋಪಿಗಳು ದರ್ಶನ್ ಹೆಸರು ಹೇಳಿರುವುದರಿಂದ ಮೈಸೂರಿನಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ, ದರ್ಶನ್ ಹೆಸರೇಕೆ ಕೇಳಿ ಬಂದಿದೆ ಎಂಬುದರ ಕುರಿತು ತನಿಖೆಯ ನಂತರವೇ ಸ್ಪಷ್ಟತೆ ಸಿಗುತ್ತದೆ ಎಂದು ತಿಳಿಸಿದರು.