ದಾವಣಗೆರೆ: ಪೊಲೀಸರ ವಶದಲ್ಲಿದ್ದ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ. ವ್ಯಕ್ತಿಯ ಸಂಬಂಧಿಕರು ಇದು ಲಾಕಪ್ ಡೆತ್. ಪೊಲೀಸರೇ ಇವನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ.
ಲಾಕಪ್ ಡೆತ್ ಎಂಬುದು ಸಂಬಂಧಿಕರ ಆರೋಪ: ಚನ್ನಗಿರಿಯ ಟಿಪ್ಪು ನಗರದ ನಿವಾಸಿ ಆದಿಲ್ (30) ಮೃತ ವ್ಯಕ್ತಿ. ಮನೆಯವನನ್ನು ಕಳೆದುಕೊಂಡ ಅದಿಲ್ ಸಂಬಂಧಿಕರು ಠಾಣೆಗೆ ನುಗ್ಗಿ ಹಾನಿಗೊಳಿಸಿದ್ದು, ಬಿಗು ವಾತಾವರಣ ನಿರ್ಮಾಣವಾಗಿತ್ತು. ಮೃತ ಆದಿಲ್ ಮೇಲೆ ಮಟ್ಕಾ ಆಡಿಸಿದ ಆರೋಪವಿತ್ತು. ಈ ಆರೋಪದ ಮೇರೆಗೆ ಪೊಲೀಸ್ ವಶದಲ್ಲಿದ್ದ ಆದಿಲ್ ಚನ್ನಗಿರಿಯಲ್ಲಿ ನಿನ್ನೆ ಅನಾರೋಗ್ಯದಿಂದ ಮೃತಪಟ್ಟಿದ್ದು, ವ್ಯಕ್ತಿಯ ಸಂಬಂಧಿಕರು ಲಾಕಪ್ ಡೆತ್ ಎಂದು ಆರೋಪಿಸಿ ಕಳೆದ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಕಳೆದ ರಾತ್ರಿ ಠಾಣೆಯೆದುರು ಪ್ರತಿಭಟನೆ: ಚನ್ನಗಿರಿ ಪೊಲೀಸ್ ಠಾಣೆ ಎದುರು ಶುಕ್ರವಾರ ತಡರಾತ್ರಿ ಜಮಾಯಿಸಿದ್ದ ವ್ಯಕ್ತಿಯ ಸಂಬಂಧಿಕರು ಠಾಣೆಯೊಳಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದರು. ಪೊಲೀಸ್ ಜೀಪ್‌ಗಳನ್ನು ಹಾನಿಗೊಳಿಸಿದ್ದಾರೆ. ನಿನ್ನೆ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸಂಜೆ ಪೊಲೀಸ್ ಠಾಣೆಗೆ ಕರೆತಂದ ವೇಳೆ ಅದಿಲ್ ಬಿ.ಪಿ ಲೋ ಆಗಿ ಕುಸಿದುಬಿದ್ದಿದ್ದಾನೆ. ಬಳಿಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಇದೆ. ಅದ್ರೆ ಆರೋಪಿ ಸಾವಿಗೆ ಪೊಲೀಸರೇ ಕಾರಣ ಎಂದು ಆಕ್ರೋಶಗೊಂಡ ಸಂಬಂಧಿಕರು ಕಳೆದ ರಾತ್ರಿ ಠಾಣೆಯೆದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಸುಧಾರಿಸಿದ ಪರಿಸ್ಥಿತಿ: ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಅವರು ಮೃತ ಆದಿಲ್ ಸಂಬಂಧಿಕರನ್ನು ಮನವೊಲಿಸಲು ಯತ್ನಿಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಠಾಣೆ ಎದುರು ಬಿಗುವಿವ ವಾತಾವರಣ ನಿರ್ಮಾಣವಾಗಿ, ಪೊಲೀಸರು ಕೂಡ ಇಕ್ಕಟ್ಟಿಗೆ ಸಿಲುಕಿದ್ದರು. ಇಂದು ಪರಿಸ್ಥಿತಿ ಸುಧಾರಿಸಿದೆ.
ಎಸ್ಪಿ ರಿಯಾಕ್ಷನ್: ಈ ಬಗ್ಗೆ ಎಸ್ಪಿ ಉಮಾಪ್ರಶಾಂತ್ ಪ್ರತಿಕ್ರಿಯಿಸಿ, "ನಿನ್ನೆ ವಶಕ್ಕೆ ಪಡೆಯಲಾದ ಅದಿಲ್ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಠಾಣೆಯಲ್ಲಿ ಕೆಲವೇ ನಿಮಿಷಗಳಿದ್ದ. ಅದಾಗ್ಯೂ, ಅವರ ಸಂಬಂಧಿಕರು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತೇವೆ. ಮೃತನ ತಂದೆ ಖಲೀಮ್ ಉಲ್ಲಾ ಕೂಡಾ ದೂರು ಸಲ್ಲಿಸಿದ್ದಾರೆ. ನ್ಯಾಯಾಧೀಶರ ಸಮ್ಮುಖದಲ್ಲಿ ಶವಪರೀಕ್ಷೆ ನಡೆಯಲಿದೆ. 5 ಪೊಲೀಸ್ ವಾಹನಕ್ಕೆ ಹಾನಿಯಾಗಿದ್ದು, 11 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೃತನ ತಂದೆಯ ದೂರು ಸೇರಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ'' ಎಂದು ತಿಳಿಸಿದರು.