ಬೆಂಗಳೂರು : ಮದ್ಯ ಸೇವನೆಗೆ ಹಣ ಕೊಡುವಂತೆ ಪೀಡಿಸುತ್ತಿದ್ದವನನ್ನು ಕೊಲೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಮಾರಸ್ವಾಮಿ (28) ಎಂಬಾತನನ್ನು ಮಾರಣಾಂತಿಕವಾಗಿ ಥಳಿಸಿ, ಆತನ ಸಾವಿಗೆ ಕಾರಣವಾಗಿದ್ದ ಬಳ್ಳಾರಿ ಮೂಲದ ಸುನೀಲ್ ಎಂಬಾತನನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ; ತುಮಕೂರಿನ ಮಠದ ಹಳೆ ವಿದ್ಯಾರ್ಥಿಯಾಗಿದ್ದ ಸುನೀಲ್, ಫೆಬ್ರವರಿ 1ರಂದು ಮಠಕ್ಕೆ ಭೇಟಿ ನೀಡಿದ್ದ. ಅಂದು ಮಠದಲ್ಲಿ ತಂಗಿದ್ದು, ಬೆಳಗ್ಗೆ ಮದ್ಯಪಾನ ಮಾಡಲು ಬಾರ್ಗೆ ಹೋದಾಗ ಕುಮಾರಸ್ವಾಮಿ ಮತ್ತು ಆತನ ಸ್ನೇಹಿತರ ಪರಿಚಯವಾಗಿತ್ತು. ಗಾರೆ ಕೆಲಸ ಮಾಡಿಕೊಂಡಿದ್ದ ಕುಮಾರಸ್ವಾಮಿ ಮತ್ತವನ ಸ್ನೇಹಿತರಿಗೆ ಸುನೀಲ್ ತಾನೇ ಮದ್ಯ ಹಾಗೂ ತಿಂಡಿಯನ್ನೂ ಕೊಡಿಸಿದ್ದ.
ಇದೇ ಸಂದರ್ಭದಲ್ಲಿ ಸುನೀಲ್ ಬಳಿ ಸುಮಾರು 19 ಸಾವಿರ ರೂ. ನಗದು ಹಣ ಇರುವುದನ್ನು ಕುಮಾರಸ್ವಾಮಿ ತಿಳಿದುಕೊಂಡಿದ್ದ. ನಂತರ ಮಠದಲ್ಲಿರುವ ತನ್ನೊಬ್ಬ ಪರಿಚಯದ ವಿದ್ಯಾರ್ಥಿ ಹಾಗೂ ಹಳೆಯ ಶಿಕ್ಷಕರುಗಳನ್ನು ಭೇಟಿಯಾಗಲು ವಾಪಸ್ ತೆರಳಿದ್ದ ಸುನೀಲ್ ಸಂಜೆ 4:30ರ ಸುಮಾರಿಗೆ ಪುನಃ ಅದೇ ಬಾರ್ಗೆ ಬಂದಿದ್ದ.
ಕ್ಯಾತಸಂದ್ರ ಸರ್ಕಲ್ ಬಳಿ ಇಬ್ಬರ ನಡುವೆ ಗಲಾಟೆ: ಮದ್ಯ ಸೇವಿಸಿ, ಪಾರ್ಸೆಲ್ ಸಹ ತೆಗೆದುಕೊಂಡು ವಾಪಸ್ ಹೊರಟಿದ್ದ ಸುನೀಲ್ನ ಹಿಂದೆ ಬಿದ್ದಿದ್ದ ಕುಮಾರಸ್ವಾಮಿ, ಮತ್ತೆ ಹಣ ಕೊಡುವಂತೆ ಪೀಡಿಸಲಾರಂಭಿಸಿದ್ದ. ಈ ವೇಳೆ ಕ್ಯಾತ್ಸಂದ್ರ ಸರ್ಕಲ್ ಬಳಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಗಲಾಟೆ ಮಾಡಿಕೊಂಡೇ ಕ್ಯಾತ್ಸಂದ್ರ ರೈಲ್ವೆ ನಿಲ್ದಾಣದ ಬಳಿ ಇಬ್ಬರೂ ಬಂದಿದ್ದರು. ಈ ವೇಳೆ ಸಿಟ್ಟಿಗೆದ್ದ ಸುನೀಲ್ ಕೈನಿಂದ ಗುದ್ದಿ, ಕಾಲಿನಲ್ಲಿ ತುಳಿದು ಕುಮಾರಸ್ವಾಮಿಯನ್ನ ಕೊಲೆಗೈದು ಫ್ಲಾಟ್ಫಾರ್ಮ್ನಲ್ಲಿ ಶವ ಬಿಟ್ಟು ಹೋಗಿದ್ದ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡ ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣಾ ಪೊಲೀಸರು, ಮೃತನ ಪ್ಯಾಂಟ್ ಜೇಬಿನಲ್ಲಿ ಸಿಕ್ಕ ಮೊಬೈಲ್ ನಂಬರ್ ಆಧರಿಸಿ ತನಿಖೆ ಕೈಗೊಂಡಾಗ ಆತನ ವಿವರ ಪತ್ತೆಯಾಗಿತ್ತು. ಬಳಿಕ ಮೃತ ಕುಮಾರಸ್ವಾಮಿಯೊಂದಿಗೆ ಆರೋಪಿ ಸುನೀಲ್ ಗಲಾಟೆ ಮಾಡಿಕೊಳ್ಳುತ್ತಿದ್ದುದನ್ನು ಕಂಡಿದ್ದ ಪ್ರತ್ಯಕ್ಷದರ್ಶಿಯೊಬ್ಬನ ಮಾಹಿತಿ ಆಧರಿಸಿ ತನಿಖೆ ಕೈಗೊಂಡು ಆತನನ್ನು ಬಂಧಿಸಿರುವುದಾಗಿ ರೈಲ್ವೆ ಎಸ್ಪಿ ಡಾ ಸೌಮ್ಯಲತಾ ಎಸ್ ಕೆ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: 600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು