ದಾವಣಗೆರೆ: 90ರ ದಶಕದಲ್ಲಿ ಅಪಘಾತದ 'ಹಾಟ್ ಸ್ಪಾಟ್' ಎಂದು ಗುರುತಿಸಿಕೊಂಡಿದ್ದ ದಾವಣಗೆರೆಯ ಆನಗೋಡು ರಾಷ್ಟ್ರೀಯ ಹೆದ್ದಾರಿಯ ಇತಿಹಾಸವೇ ವಿಚಿತ್ರ. ಬೆಂಗಳೂರಿನಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಪುಣೆ, ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಹೆದ್ದಾರಿ ಇದು. ಕಿರಿದಾದ ಸಿಂಗಲ್ ರಸ್ತೆ ಇದಾಗಿದ್ದುದರಿಂದ ಆನಗೋಡು ಬಳಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿದ್ದವು. ಹಾಗಾಗಿ ಇದನ್ನು ಅಪಘಾತದ 'ಹಾಟ್ ಸ್ಪಾಟ್' ಎಂದೇ ಕರೆಯುತ್ತಿದ್ದರು. ಹೀಗೆ ಕರೆಯಲು ಆಗಿನ ಅಂಕಿ-ಸಂಖ್ಯೆಗಳೇ ಸಾಕ್ಷಿಯಾಗಿವೆ. ನಟ ಶಂಕರ್ ನಾಗ್ ಸೇರಿ ಇಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ!.
ಅಷ್ಟೇ ಅಲ್ಲ, ದೊಡ್ಡ ದೊಡ್ಡ ರಾಜಕೀಯ ನಾಯಕರ ಕಾರು ಅಪಘಾತವಾಗಿದ್ದು ಕೂಡಾ ಇದೇ ಆನಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ. ಹಾಗಾಗಿ, ಈ ರಸ್ತೆಯಲ್ಲಿ ಓಡಾಡಬೇಕಾದರೆ ವಾಹನ ಸವಾರರು ಭಯಪಡುತ್ತಿದ್ದ ಕಾಲವೊಂದಿತ್ತು. ಆದರೆ, ಇದೇ ರಸ್ತೆ ಈಗ ಆರು ಪಥ ರಸ್ತೆಯಾಗಿ ಬದಲಾಗಿದ್ದು, ಶೇಕಡಾ 80ರಷ್ಟು ಅಪಘಾತಗಳು ಕಡಿಮೆಯಾಗಿವೆ.
"ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಅಪಘಾತಕ್ಕೆ ಹೆಸರುವಾಸಿ. ಈ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಶಂಕರ್ ನಾಗ್ ಮೃತಪಟ್ಟಿದ್ದು ಇದೇ ದಾರಿಯಲ್ಲಿ. ಇಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರಿಂದ ವಾಹನ ಸಾವರರು ಆತಂಕದಲ್ಲೇ ವಾಹನಗಳನ್ನು ಚಲಾಯಿಸುತ್ತಿದ್ದರು. 1990ರ ದಶಕದಲ್ಲಿ ಈ ರಸ್ತೆ ಬಹಳ ಚಿಕ್ಕದಿತ್ತು. ಕಿರಿದಾದ ರಸ್ತೆಯ ಪಕ್ಕದಲ್ಲಿ ಮರಗಳು ಬೆಳೆದಿದ್ದವು. ದೊಡ್ಡ ದೊಡ್ಡ ಶಹರಗಳಿಗೆ (ಬೆಂಗಳೂರು-ಹುಬ್ಬಳ್ಳಿ-ಪುಣೆ) ಸಂಪರ್ಕ ಹೊಂದಿತ್ತು. ಆ ಕಾಲದಲ್ಲಿ ಈ ರಸ್ತೆಬಿಟ್ಟರೆ ಮಹಾರಾಷ್ಟ್ರಕ್ಕೆ ತೆರಳಲು ಬೇರೆ ಯಾವುದೇ ದಾರಿ ಇರಲಿಲ್ಲ. ರಾತ್ರಿ ವೇಳೆ ಪ್ರಯಾಣಿಸುತ್ತಿದ್ದ ವಾಹನಗಳು ಹೆಚ್ಚು ಅಪಘಾತವಾಗುತ್ತಿದ್ದವು. ವಾಹನ ಚಾಲಕರು ನಿದ್ದೆಗಣ್ಣಿನಲ್ಲಿ ಮರಕ್ಕೆ ಹೊಡೆಯುವುದು, ಎದುರುಗಡೆ ಬರುವ ವಾಹನಕ್ಕೆ ಹೊಡೆಯುವುದು ಹೆಚ್ಚಾಗಿತ್ತು" ಎನ್ನುತ್ತಾರೆ ಆನಗೋಡು ನಿವಾಸಿ ಬಸವರಾಜ್.
ತಿಂಗಳಿಗೆ 10-15 ಅಪಘಾತ!: "ದಾವಣಗೆರೆಯ ಬಾಡಾ ಕ್ರಾಸ್ನಿಂದ ಹಿಡಿದು ಹೆಬ್ಬಾಳು, ಚಿತ್ರದುರ್ಗ ಜಿಲ್ಲೆಯ ಭರಮಸಾಗರದತನಕ ಈ ರಸ್ತೆ ಅಪಘಾತದ ಸ್ಪಾಟ್ ಆಗಿತ್ತು. ಆಗ ಒಂದು ತಿಂಗಳಿಗೆ ಕನಿಷ್ಟ 10-15 ಅಪಘಾತಗಳು ಸಂಭವಿಸುತ್ತಿದ್ದವು. ಸಿಕ್ಸ್ ವೇ ಹೈವೇ ಆದ ಬಳಿಕ ಶೇ.80ರಿಂದ 90ರಷ್ಟು ಕಡಿಮೆ ಆಗಿವೆ. ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ್ದ ಅಪಘಾತದಲ್ಲಿ 16 ಜನ ಸ್ಪಾಟ್ ಡೆತ್ ಆಗಿದ್ದರು. ಇದು ಈ ರಸ್ತೆಯಲ್ಲಿ ಸಂಭವಿಸಿದ ದೊಡ್ಡ ಅಪಘಾತ" ಎಂದು ಬಸವರಾಜ್ ಹೇಳಿದರು.
ಮಾನವೀಯತೆ ಮೆರೆಯುತ್ತಿದ್ದ ಜನ: "ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದರೆ ಸ್ಥಳೀಯರು ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆಯುತ್ತಿದ್ದರು. ವಾಹನ ಮಾಡಿ ಆಸ್ಪತ್ರೆಗೆ ದಾಖಲಿಸುತ್ತಿದ್ದರು. ಭಯದಲ್ಲೇ ಓಡಾಡುವ ಕಾಲ ಅದಾಗಿತ್ತು. ಈಗ ಆರು ಪಥದ ಹೈವೇ ಆದ ಬಳಿಕ ಅಪಘಾತದ ಪ್ರಮಾಣ ತಗ್ಗಿದೆ. ಹೈವೇ ಸುಸಜ್ಜಿತವಾಗಿದೆ. ಆಗೊಂದು ಈಗೊಂದು ಬಿಟ್ಟರೆ ಭಾಗಶಃ ತಗ್ಗಿದೆ" ಎನ್ನುತ್ತಾರೆ ಆನಗೋಡು ಗ್ರಾ.ಪಂ.ಅಧ್ಯಕ್ಷ ನಸ್ರುಲ್ಲಾ.