ಉಡುಪಿ: ಸಾಧಿಸುವ ಛಲ ಇದ್ದವರಿಗೆ ಯಾವ ಅಡೆತಡೆಗಳು ಬಂದರೂ ಅವುಗಳನ್ನು ದಾಟಿ ಹೋಗುವ ಶಕ್ತಿ ಇರುತ್ತದೆ. ಜೀವನದಲ್ಲಿ ಯಾವುದೇ ಸಾಧನೆ ಮಾಡಲು ಗುರಿ, ಆತ್ಮವಿಶ್ವಾಸ ಹಾಗೂ ಧೃಡ ಸಂಕಲ್ಪ ಇದ್ದಾಗ ಎಲ್ಲವೂ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಉಡುಪಿಯ ಯುವಕನೊಬ್ಬನ ಸಾಧನೆಯೇ ಸಾಕ್ಷಿ. ಹಾಗಾದರೆ ಆ ಯುವನ ಮಾಡಿದ ಸಾಧನೆ ಏನು ನೋಡೋಣ ಬನ್ನಿ.
ಉಡುಪಿಯ ಬ್ರಹ್ಮಗಿರಿಯ ಯುವಕ ಸಿದ್ವಿನ್ ಶೆಟ್ಟಿ ಮೂರು ಎತ್ತರದ ಶಿಖರಗಳನ್ನು ಯಶಸ್ವಿಯಾಗಿ ಏರುವ ಮೂಲಕ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಜುಮ್ಮು ಮತ್ತು ಕಾಶ್ಮೀರದಲ್ಲಿರುವ ಸುಮಾರು 14,000 ಅಡಿ ಎತ್ತರದ ಮಹಾಗುಣ ಪರ್ವತ, 14,200ಕ್ಕೂ ಅಡಿ ಎತ್ತರದ ಅಫರ್ವತ್ ಶಿಖರ ಮತ್ತು ಹಿಮಾಚಲ ಪ್ರದೇಶದಲ್ಲಿರುವ 20,183ಕ್ಕೂ ಅಧಿಕ ಅಡಿ ಎತ್ತರದ ಮೌಂಟ್ ಯುನಾಮ್ ಶಿಖರಗಳನ್ನು ಯಶಸ್ವಿಯಾಗಿ ಏರಿದ್ದಾರೆ.
ಮೌಂಟ್ ಎವರೆಸ್ಟ್ ಮೇಲೆ ತುಳುನಾಡಿನ ಧ್ವಜ ಹಾರಿಸಿದ ಉಡುಪಿಯ ಸಿದ್ವಿನ್ ಶೆಟ್ಟಿ: ಸಿದ್ವಿನ್ ಶೆಟ್ಟಿ ಅವರು ಉಡುಪಿ ಬ್ರಹ್ಮಗಿರಿ ಸಮೀಪದ ಸುರೇಶ್ ಕೃಷ್ಣ ಶೆಟ್ಟಿ ಮತ್ತು ಸುಜಯ ಎಸ್ ಶೆಟ್ಟಿ ದಂಪತಿಯ ಪುತ್ರರಾಗಿದ್ದು, ನಿಟ್ಟೆ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇವರಿಗೆ ಟ್ರೆಕ್ಕಿಂಗ್ ಬಗ್ಗೆ ಒಲವು. 2023 ರಲ್ಲಿ ವಿಶ್ವದ ಎತ್ತರದ ಲಡಾಖ್ನ ಉಮ್ಲಿಂಗ್ ಲಾ ಮತ್ತು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಮೇಲೆ ತುಳುನಾಡಿನ ಧ್ವಜ ಹಾರಿಸಿದ್ದರು.
51 ಟ್ರಕ್ಕಿಂಗ್ ಜೊತೆಗೆ ಹಲವು ಸಾಧನೆ: ಸಿದ್ವಿನ್ ಅವರು 2024ರ ಜುಲೈ 21 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪರ್ವತಾರೋಹಣ ಕೋರ್ಸ್ ಪೂರ್ಣಗೊಳಿಸಿದ ನಂತರ ತಮ್ಮ ಯಾತ್ರೆ ಆರಂಭಿಸಿ ಅದರಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ. ಟ್ರೆಕ್ಕಿಂಗ್ ಮತ್ತು ಪರ್ವತಾರೋಹಣಕ್ಕಾಗಿ ಸಿದ್ವಿನ್ ಅವರ ಉತ್ಸಾಹವು ಅವರನ್ನು ಭಾರತ, ನೇಪಾಳ ಮತ್ತು ಭೂತಾನ್ನಲ್ಲಿ ಹಲವಾರು ಸಾಹಸಗಳಲ್ಲಿ ತೊಡಗಿಸಿಕೊಳ್ಳೂವಂತೆ ಮಾಡಿದೆ. ಈಗಾಗಲೇ 51 ಟ್ರಕ್ಕಿಂಗ್ ಸಹಿತ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಹೆಚ್ಚಾಗಿ ಏಕಾಂಗಿಯಾಗಿ ಮತ್ತು ಎತ್ತರದ ಸ್ಥಳಗಳಿಗೆ ವ್ಯಾಪಕವಾದ ಬೈಕ್ ರೈಡ್ ಮತ್ತು ತೀರ್ಥಯಾತ್ರೆಗಳನ್ನು ಸಿದ್ವಿನ್ ಕೈಗೊಂಡಿದ್ದಾರೆ.
ಈಟಿವಿ ಭಾರತ ಜೊತೆಗೆ ಸಿದ್ವಿನ್ ಶೆಟ್ಟಿ ಮಾತನಾಡಿ, 2023ರಲ್ಲಿ ವಿಶ್ವದ ಎತ್ತರದ ಲಡಾಖ್ನ ಉಮ್ಲಿಂಗ್ ಲಾ ಮತ್ತು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಮೇಲೆ ತುಳುನಾಡಿನ ಧ್ವಜವನ್ನು ಹಾರಿಸಿದ್ದೇನೆ. ಮಾತ್ರವಲ್ಲ ನನ್ನ ಪ್ರಯಾಣದ ವೇಳೆ ಸಿಗುವಂತಹ ದೇವಸ್ಥಾನ ಇವೆಲ್ಲವನ್ನು ಪ್ರವೇಶಿಸಿ ದೇವರ ಆಶಿರ್ವಾದ ಸಹ ಪಡೆದುಕೊಂಡಿದ್ದೇನೆ. ಆ ಬಳಿಕ ನವದೆಹಲಿ ಮಾರ್ಗಾಗಿ ಊರನ್ನು ತಲುಪಿದ್ದೇನೆ ಎಂದು ತಿಳಿಸಿದರು.