ಚಿಕ್ಕೋಡಿ (ಬೆಳಗಾವಿ): ಮಹಿಳೆಯೊಬ್ಬರು ತನ್ನ ಸ್ವಂತ ಹಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಗ್ರಂಥಾಲಯ ಕಟ್ಟಿಸಿ ಮಾದರಿಯಾಗಿದ್ದಾರೆ.
ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ಮಲ್ಲವ್ವ ಭೀಮಪ್ಪ ಮೇಟಿ ಎಂಬ ತನಗೆ ಬಂದ ಗೃಹಲಕ್ಷ್ಮಿ ಹಣ ಹಾಗೂ ಪಂಚಾಯಿತಿಯಿಂದ ಬಂದಿರುವ ಗೌರವ ಧನದಿಂದ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಮಂಟೂರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿರುವ ಮಲ್ಲವ್ವ ಭೀಮಪ್ಪ ಮೇಟಿ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ತಮ್ಮ ಊರಿನ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಬೆಂಗಳೂರು, ಧಾರವಾಡ, ಬಿಜಾಪುರಕ್ಕೆ ಹೋಗುತ್ತಾರೆ. ಅಲ್ಲಿ ತರಬೇತಿ ಪಡೆಯಲು ಅವರಿಗೆ ಆರ್ಥಿಕ ಸಮಸ್ಯೆ ಆಗುತ್ತಿತ್ತು. ಊಟ, ಆರೋಗ್ಯದ ಸಮಸ್ಯೆ ಕೂಡ ಕಾಡುತ್ತಿತ್ತು. ಅಲ್ಲಿ ಅವರು ಲೈಬ್ರರಿಯಲ್ಲಿ ಕುಳಿತು ಓದುತ್ತಾರೆ. ಹೀಗಾಗಿ ನಮ್ಮ ಗ್ರಾಮದಲ್ಲಿಯೇ ಒಂದು ಗ್ರಂಥಾಲಯ ಕಟ್ಟಬೇಕು ಅನ್ನೋದು ನನ್ನ ಕನಸಾಗಿತ್ತು. ನನಗೆ ಬಂದ 13 ತಿಂಗಳ 26 ಸಾವಿರ ರೂ. ಗೃಹಲಕ್ಷ್ಮಿ ಹಣ ಹಾಗೂ ಗ್ರಾಮ ಪಂಚಾಯಿತಿ ಮೆಂಬರ್ ಆಗಿರುವ ಕಾರಣಕ್ಕೆ ಸಿಗುವ ಗೌರವ ಧನವನ್ನು ಒಟ್ಟುಗೂಡಿಸಿ ಮಿನಿ ಗ್ರಂಥಾಲಯ ಕಟ್ಟಿಸಿದ್ದೇನೆ. ಈ ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂ. ಖರ್ಚಾಗಿದೆ" ಎಂದು ತಿಳಿಸಿದರು.
ವಿದ್ಯಾರ್ಥಿ ಸಿದ್ಧಾರೂಢ ಕಾಲತಿಪ್ಪಿ ಮಾತನಾಡಿ, "ಮಲ್ಲವ್ವ ಭೀಮಪ್ಪ ಮೇಟಿ ಹೆಚ್ಚೇನೂ ಓದಿದವರಲ್ಲ. ಆದರೆ, ತಮ್ಮ ಊರ ಮಕ್ಕಳು ಓದಬೇಕು. ಒಳ್ಳೆಯ ಕೆಲಸ ಪಡೆದುಕೊಳ್ಳಬೇಕು ಎಂಬ ಆಶಯದಿಂದ ಗ್ರಂಥಾಲಯ ನಿರ್ಮಿಸಿದ್ದಾರೆ. ಈ ಗ್ರಂಥಾಲಯದಿಂದ ನಮಗೆ ಬಹಳ ಅನುಕೂಲವಾಗಿದೆ. ದೂರದ ಊರುಗಳಿಗೆ ತೆರಳಿ ವಿದ್ಯಾಭ್ಯಾಸ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ದುಬಾರಿ ಬೆಲೆಯ ಪುಸ್ತಕಗಳನ್ನು ಕೊಂಡು ಓದಲು ಸಹ ಆಗದೇ ಸರ್ಕಾರಿ ನೌಕರಿ ಹಿಡಿಯಬೇಕೆಂಬ ಆಸೆಯೇ ಕಮರುತ್ತಿತ್ತು. ಈ ಸಮಯದಲ್ಲಿ ಗ್ರಂಥಾಲಯ ನಿರ್ಮಿಸಿಕೊಟ್ಟ ಮಲ್ಲವ್ವ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದರು.