ಉಡುಪಿ: ಉಡುಪಿ ನಗರದ ಹೃದಯ ಭಾಗದ ನಗರ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಸರ್ಕಾರಿ ನೌಕರರ ವಸತಿ ಸಮುಚ್ಚಯದ ಒಟ್ಟು ಆರು ಮನೆಗಳಿಗೆ ನುಗ್ಗಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ನಾಲ್ಕು ಮನೆಯಲ್ಲಿ ಕಳ್ಳತನದ ವಿಫಲ ಯತ್ನ: ಒಂದು ಮನೆಯಿಂದ 120 ಗ್ರಾಂ ಚಿನ್ನ, 20,000 ನಗದು ಕಳ್ಳತನ, ಮತ್ತೊಂದು ಮನೆಯಿಂದ 20,000 ನಗದು ಕಳ್ಳತನ ಮಾಡಿದ್ದು ಉಳಿದ ನಾಲ್ಕು ಮನೆಯಲ್ಲಿ ಕಳ್ಳತನದ ಯತ್ನ ವಿಫಲವಾಗಿದೆ. ವಾರಾಂತ್ಯದ ಎರಡು ರಜೆಗಳಿದ್ದ ಕಾರಣ ಮನೆಯಲ್ಲಿ ವಾಸವಿರುವವರು ಮನೆಗೆ ಬೀಗ ಹಾಕಿ ಹೊರಗಡೆ ತೆರಳಿದ್ದರು. ಮನೆಯಲ್ಲಿ ವಾಸ್ತವ್ಯ ಇಲ್ಲದಿರುವದನ್ನು ಗಮನಿಸಿ ಕಳ್ಳರು ಕಳ್ಳತನ ನಡೆಸಿದ್ದಾರೆ.
ಕಳ್ಳರನ್ನು ಹುಡುಕಲು ವಸತಿ ಸಮುಚ್ಚಯದ ಆಸು ಪಾಸು ಯಾವದೇ ಸಿಸಿ ಕ್ಯಾಮೆರಾಗಳಿಲ್ಲದ ಕಾರಣ ಪೋಲಿಸ್ ಇಲಾಖೆಗೆ ಇದೊಂದು ದೊಡ್ಡ ಸವಾಲಾಗಿದೆ. ಕಳ್ಳತನ ನಡೆದ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡೆಂಗ್ಯೂ ಚಿಕಿತ್ಸೆಗೆ ಇಟ್ಟ ಹಣ ಕಳ್ಳರ ಪಾಲು: ಕಳ್ಳತನ ನಡೆದಿರುವ ಮನೆಯ ಫ್ಲಾವಿಯ ಡಿ ಸೋಜಾ ಮಾಧ್ಯಮ ಜತೆ ಮಾತನಾಡಿ, "ಶನಿವಾರ ಹಾಗೂ ಭಾನುವಾರ ರಜೆ ಇರುವ ಕಾರಣ ಕಡೆಕಾರ್ನಲ್ಲಿರುವ ಫ್ರೆಂಡ್ ಮನೆಗೆ ಹೋಗಿ ಉಳಿದುಕೊಂಡಿದೆ. ಡೆಂಗ್ಯೂದಿಂದ ಗುಣಮುಖವಾಗಿ ಬಂದಿದೆ. ಮತ್ತೆ ಎಲ್ಲಿಯಾದರೂ ಮುಂದೆ ಚಿಕಿತ್ಸೆಗೆ ಬೇಕಾಗಬಹುದು ಎಂಬ ಕಾರಣಕ್ಕೆ ಹಣವನ್ನು ಇರಿಸಿದ್ದೆ. ಆದರೆ, ಇಂದು ಬಂದು ನೋಡಿದಾಗ ಮನೆಯ ಬಾಗಿಲು ತೆರೆದುಕೊಂಡಿತ್ತು. ಒಳಗೆ ಹೋಗಿ ನೋಡಿದಾಗ ಕಳ್ಳತನವಾಗಿದೆ. ಕೂಡಲೇ ನಗರ ಪೊಲೀಸ್ ಠಾಣೆಗೆ ತಿಳಿಸಿದೆ" ಎಂದು ತಿಳಿಸಿದರು.
ಬೈಲೂರು ವಾರ್ಡ್ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, "ಸರ್ಕಾರಿ ನೌಕರರ ವಸತಿ ಸಮುಚ್ಚಯದ ಒಟ್ಟು ಆರು ಮನೆಗಳಿಗೆ ನುಗ್ಗಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ನಗರ ಸಭೆಯಿಂದ ಇಲ್ಲಿ ಯಾವುದೇ ರೀತಿಯ ಕೆಲಸ ಮಾಡಲು ಬರುವುದಿಲ್ಲ. ಆದರೂ ಮೂಲ ಸೌಕರ್ಯ ವ್ಯವಸ್ಥೆ ಈ ಹಿಂದೆ ಮಾಡಿದ್ದೆವೆ. ಮುಂದೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಇಲ್ಲಿನವರಿಗೆ ಸೂಕ್ತ ವ್ಯವಸ್ಥೆ ಮಾಡಲು ಹೇಳುತ್ತೆವೆ" ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಭರವಸೆ ನೀಡಿ ₹28 ಲಕ್ಷ ವಂಚನೆ; 6 ಜನರ ವಿರುದ್ಧ ಎಫ್ಐಆರ್ - Cheating In The Name Of Govt Job