ಬೆಂಗಳೂರು: ಕಾರು ಚಾಲಕನೋರ್ವ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಪಾದಚಾರಿಗಳು ಸೇರಿದಂತೆ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ವಿಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರದಂದು (ಮೇ 22) ಚಾಲಕ ಈ ಕೃತ್ಯವೆಸಗಿದ್ದು, ಘಟನಾ ಸ್ಥಳದ ದೃಶ್ಯವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯನಗರದ ವೆಸ್ಟ್ ಆಫ್ ರೋಡ್ ಎನ್ಪಿಎಸ್ ಜಂಕ್ಷನ್ ಬಳಿ ಮೇ 22ರ ಸಂಜೆ ಕೃತ್ಯ ನಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 22 ವರ್ಷದ ಚಾಲಕನೋರ್ವ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ರಸ್ತೆ ಬದಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದನು. ತಡೆಯಲು ಹೋದ ಪಾದಚಾರಿಗಳ ಮೇಲೆ ಕಾರು ಹತ್ತಿಸಲು ಈತ ಮುಂದಾಗಿದ್ದ.
ಅದೃಷ್ಣವಶಾತ್ ಘಟನೆಯಲ್ಲಿ ಪಾದಚಾರಿಗಳಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಸಿಟಿವಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಿಶೀಲನೆ ನಡೆಸಿರುವ ಸಂಚಾರಿ ಪೊಲೀಸರು ಅಡ್ಡಾದಿಡ್ಡಿ ವಾಹನ ಚಾಲನೆ ಸಂಬಂಧ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎನ್ಪಿಎಸ್ ಜಂಕ್ಷನ್ ಬಳಿ ಮರಗಳ ಕಟಾವು ಹಿನ್ನೆಲೆಯಲ್ಲಿ ವಾಹನ ಚಲಾಯಿಸಲು ಸಾಧ್ಯವಾಗಿರಲಿಲ್ಲ. ಕೆಲ ಹೊತ್ತಿನ ಬಳಿಕ ಹೇಗೋ ಕಾರು ಚಲಾಯಿಸಿ ಜಂಕ್ಷನ್ ವಸತಿ ಪ್ರದೇಶದ ಕಡೆಗೆ ಬಂದಿದ್ದು, ಸ್ಥಳೀಯರು ತನ್ನನ್ನು ಪ್ರಶ್ನಿಸಿ ಕಾರು ಚಾಲನೆಗೆ ಅಡ್ಡಿಪಡಿಸಿದ್ದರು ಎಂದು ಹೇಳಿಕೆ ಕೊಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕ್ಯಾಂಟರ್ ಅಡ್ಡಗಟ್ಟಿ ₹32 ಲಕ್ಷ ದರೋಡೆ ಪ್ರಕರಣ: ಐವರ ಬಂಧನ, ₹31 ಲಕ್ಷ ರಿಕವರಿ - robbery case