ಬೆಳ್ತಂಗಡಿ (ದಕ್ಷಿಣ ಕನ್ನಡ): ಶಿಕ್ಷಕನೊಬ್ಬ ತನಗೆ ಅವಮಾನ ರೀತಿಯಲ್ಲಿ ಮೆಸೇಜ್ ಮಾಡಿದ್ದಾನೆ ಎಂಬ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ವಾರದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ (ಫೆ.12) ಮೃತಪಟ್ಟಿದ್ದಾಳೆ. ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಬಗ್ಗೆ ಅದೇ ಶಾಲೆಯ ಶಿಕ್ಷಕ ಇಲ್ಲಸಲ್ಲದ ಅವಮಾನಕಾರಿ ವಿಚಾರಗಳನ್ನು ಆಕೆಯ ಸ್ನೇಹಿತೆಗೆ ವ್ಯಾಟ್ಸಾಪ್ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರ ಅದೆಗೋ ವಿದ್ಯಾರ್ಥಿನಿಗೆ ಗೊತ್ತಾಗಿತ್ತು. ಈ ಬಗ್ಗೆ ವಿದ್ಯಾರ್ಥಿನಿಯ ತಾಯಿ ಶಾಲೆಗೆ ಹೋಗಿ ಶಿಕ್ಷಕನನ್ನು ಪ್ರಶ್ನೆ ಕೂಡಾ ಮಾಡಿದ್ದರು. ಆದರೆ, ಈ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ವಿದ್ಯಾರ್ಥಿನಿ ಫೆ.7ರಂದು ಶಾಲೆಗೆ ಬರುವಾಗ ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಆಕೆಯನ್ನು ಶಾಲೆಯ ಶಿಕ್ಷಕರೆಲ್ಲ ಸೇರಿ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಫೆ.12 ರಂದು ಮುಂಜಾನೆ 5:30 ರ ಸುಮಾರಿಗೆ ಆಕೆ ಕೊನೆಯುಸಿರೆಳೆದಿದ್ದಾಳೆ.
ಮೃತ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆತನನ್ನು ಬಂಧಿಸಿದ ಪೊಲೀಸರು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ನ್ಯಾಯಾಲಯ ಆತನಿಗೆ ಮಧ್ಯಂತರ ಜಾಮೀನು ನೀಡಿದೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಫುಟ್‌ಬಾಲ್ ಆಟಗಾರನ ಸಾವು ಪ್ರಕರಣ; ಲಾರಿ ಚಾಲಕನ ಬಂಧನ