ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ರೈಲ್ವೆ ನೌಕರನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ನದೀಂ ಬಂಧಿತ ಆರೋಪಿ.
ಬಂಧಿತ ನದೀಂ ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ಜಾಬ್ ನೋಟಿಫಿಕೇಷನ್ ಪೇಜ್ ಕ್ರಿಯೇಟ್ ಮಾಡಿಕೊಂಡಿದ್ದ. ಈತ ಕೆಲಸದ ಅವಶ್ಯಕತೆ ಇರುವ ಹುಡುಗಿಯರು, ಮದುವೆಯಾದ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅಂತಹವರಿಗೆ ಫೇಕ್ ನೋಟಿಫಿಕೇಷನ್ ಕಳುಹಿಸುತ್ತಿದ್ದ. ಬಳಿಕ ಅವರ ಸ್ನೇಹ ಸಂಪಾದಿಸಿ, ನಿಮಗೆ ಕೆಲಸ ಕೊಡಸ್ತಿನಿ ಅಂತಿದ್ದ. ನಿಮ್ಮ ಕೆಲಸ ಆಗಬೇಕು ಎಂದರೆ ನಮ್ಮ ಹಿರಿಯ ಅಧಿಕಾರಿಗಳ ಜೊತೆಗೆ ಒಂದು ದಿನ ಕಳೆಯಬೇಕು ಅಂತ ಕಂಡಿಷನ್ ಹಾಕುತ್ತಿದ್ದ . ಬಳಿಕ ಇವರು ನಮ್ಮ ಆಫಿಸರ್ ಅಂತ ಫೇಕ್ ಐಡಿ ಕೊಟ್ಟು ತಾನೇ ಹುಡುಗಿಯರ ಜೊತೆ ಚಾಟ್ ಮಾಡಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಎಂಬ ಆರೋಪ ಮಾಡಲಾಗಿದೆ.
ವಂಚಕ ಬಲೆಗೆ ಬಿದ್ದಿದ್ದು ಹೇಗೆ?: ಹುಬ್ಬಳ್ಳಿ ಕೇಶ್ವಾಪುರ ಮೂಲದ ಗೃಹಿಣಿಯೊಬ್ಬರಿಗೆ ಗಾಳ ಹಾಕಿದ್ದ ಬಂಧಿತ ನದೀಂ. ಗೃಹಿಣಿ ಜೊತೆ ಚಾಟ್ ಮಾಡಿ ಮಂಚಕ್ಕೆ ಕರೆದಿದ್ದ. ನಾನು ದೆಹಲಿಯಿಂದ ಹುಬ್ಬಳ್ಳಿಗೆ ಬಂದಿದ್ದೇನೆ, ರೈಲ್ವೆ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದೇನೆ, ರೂಂಗೆ ಬಾ ಅಂತ ಫೋಟೋ ಕಳುಹಿಸಿದ್ದ, ಇದರಿಂದ ಭಯಗೊಂಡ ಮಹಿಳೆ ಮೊದಲು ತನ್ನ ಗಂಡನಿಗೆ ವಿಷಯ ತಿಳಿಸಿದ್ದರು. ತಕ್ಷಣ ದಂಪತಿ ಕೇಶ್ವಾಪುರ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಗೃಹಿಣಿಯನ್ನು ಗೆಸ್ಟ್ ಹೌಸ್‌ಗೆ ಕಳುಹಿಸಿದ್ದರು. ಕೊನೆಗೆ ಕಾಮುಕ ನದೀಂನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಕುರಿತು ಪೊಲೀಸ್ ಕಮಿಷನರ್ ಪ್ರತಿಕ್ರಿಯೆ ಹೀಗಿದೆ: ಈ ಕುರಿತು ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾತನಾಡಿ, "ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ನಿನ್ನೆ ಪ್ರಕರಣವೊಂದು ದಾಖಲಾಗಿದೆ. ಪ್ರಕರಣದಲ್ಲಿ ರೈಲ್ವೆ ಇಲಾಖೆಯಲ್ಲಿ ಅಕೌಂಟೆಡ್ ಆಗಿ ಕೆಲಸ ಮಾಡುವ ನದೀಂ ಎಂಬ ವ್ಯಕ್ತಿ, ಮಹಿಳೆವೊಬ್ಬರನ್ನು ಸಂಪರ್ಕಿಸಿ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಪ್ರಾರಂಭದಲ್ಲಿ ಇಂತಿಷ್ಟು ಹಣ ಕೊಡಬೇಕು ಎಂದು ಕೇಳಿದ್ದಾನೆ ಎಂದರು.
ಮಹಿಳೆ ಹಣ ಕೊಡಲು ಆಗಲ್ಲ ಎಂದಾಗ, ಲೈಂಗಿಕವಾಗಿ ಸಹಕಾರ ನೀಡಿದರೆ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಎಚ್ಚೆತ್ತ ಮಹಿಳೆ ತಮ್ಮ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕೃತ್ಯ ಎಸಗಿರುವುದು ಖಾತ್ರಿ ಪಡಿಸಿಕೊಂಡ ನಂತರ ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಹೆಚ್ಚಿನ ತನಿಖೆ ಮುಂದುವರೆಸಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಇನ್ನೆರಡು ದಿನಗಳಲ್ಲಿ 4 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಕೆ - Renukaswamy Murder Case