ಮಂಡ್ಯ: ಸತತ ಮಳೆಗೆ ಕೋಡಿ ಬಿದ್ದ ಕೆರೆ ನೀರಿನಲ್ಲಿ ಬೈಕ್ ಸಮೇತ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಆಣೆಚೆನ್ನಾಪುರ ಗ್ರಾಮದಲ್ಲಿ ನಡೆದಿದೆ.
ಕಂಬದಹಳ್ಳಿ ಗ್ರಾಮದ ರಾಮಚಂದ್ರ (67ವರ್ಷ) ರಭಸದ ಕೆರೆಕೋಡಿ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ.
ತಡರಾತ್ರಿ ಸುರಿದ ಬಾರಿ ಮಳೆಗೆ ಗ್ರಾಮದ ಕೆರೆಕೋಡಿ ತುಂಬಿ ಹರಿಯುತ್ತಿತ್ತು. ರಾಮಚಂದ್ರ ಅವರು ರಸ್ತೆಯಲ್ಲಿ ಸಂಚರಿಸುವಾಗ ಸ್ಥಳೀಯರು ಎಚ್ಚರಿಕೆ ನೀಡಿದದ್ದರೂ ನಿರ್ಲಕ್ಷ್ಯ ಮಾಡಿ ಮುಂದೆ ಸಾಗಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಯವರ ಸಹಾಯದೊಂದಿಗೆ ನೀರಿನಿಂದ ಶವವನ್ನು ಹೊರತೆಗೆದಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನೀರಲ್ಲಿ ಕೊಚ್ಚಿ ಹೋಗಿ ಬದುಕುಳಿದ ರೈತ, ಎತ್ತುಗಳು: ನದಿ ನೀರಿನ ರಭಸಕ್ಕೆ 200 ಮೀ. ರೈತ ಮತ್ತು ಎತ್ತಿನ ಗಾಡಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶೆಟ್ಟಹಳ್ಳಿ ಬಳಿಯ ಲೋಕಪಾವನಿ ನದಿಯಲ್ಲಿ ನಡೆದಿದೆ. ಸ್ಥಳೀಯರ ಮತ್ತು ಪೊಲೀಸರ ನೆರವಿನಿಂದ ರೈತ ಮತ್ತು ಎತ್ತುಗಳನ್ನು ರಕ್ಷಣೆ ಮಾಡಲಾಗಿದೆ. ಲೋಕಪಾವನಿ ನದಿಯಲ್ಲಿ ಎತ್ತಿನ ಗಾಡಿ ನಿಲ್ಲಿಸಿ ಎತ್ತುಗಳ ಮೈತೊಳೆಯುವ ವೇಳೆ ಘಟನೆ ನಡೆದಿದೆ. ಸೇತುವೆ ಬಳಿ ಸಿಲುಕಿದ್ದ ಗಾಡಿಯನ್ನು ಕ್ರೇನ್ ಮೂಲಕ ಹೊರಕ್ಕೆ ತೆಗೆಯಲಾಗಿದೆ. ಯಾರೂ ಕೂಡ ನದಿ ಬಳಿಗೆ ಹೋಗದಂತೆ ರೈತರಿಗೆ ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.
ಗುಂಡಿಗೆ ಸಿಲುಕಿದ್ದ ಬಸ್: ಕೆ.ಆರ್.ಪೇಟೆ ತಾಲೂಕಿನ ಮಾಣಿಕನಹಳ್ಳಿ ಗ್ರಾಮದ ಬಳಿ ಕೆಸರಿನ ಗುಂಡಿಗೆ ಸಿಲುಕಿದ್ದ ಸಾರಿಗೆ ಬಸ್ ಅನ್ನು ಹರಸಾಹಸದ ಬಳಿಕ ಮೇಲೆತ್ತಲಾಯಿತು. ಬಸ್ ಕೆ.ಆರ್.ಪೇಟೆ ಪಟ್ಟಣದಿಂದ ಮಾಣಿಕನಹಳ್ಳಿಗೆ ತೆರಳುತ್ತಿತ್ತು. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಪಕ್ಕದಲ್ಲಿದ್ದ ಗುಂಡಿಗೆ ಬಸ್ ಸಿಲುಕಿತ್ತು. ರಸ್ತೆ ಚಿಕ್ಕದಾಗಿದ್ದರಿಂದ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಜೆಸಿಬಿ ಯಂತ್ರ ಕರೆಸಿ ಹರಸಾಹಸದ ಬಳಿಕ ಬಸ್ ಅನ್ನು ಕೆಸರಿನಿಂದ ಮೇಲೆತ್ತಲಾಯಿತು.
ಇದನ್ನೂ ಓದಿ: ಚಾಮರಾಜನಗರ: ವಿದ್ಯುತ್ ತಂತಿ ತಗುಲಿ ಇಬ್ಬರು ರೈತರು ಸ್ಥಳದಲ್ಲೇ ಸಾವು