ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಚಿಲ್ಲರೆ ನೀಡದ ಕಂಡಕ್ಟರ್ ವಿರುದ್ಧ ಪ್ರಯಾಣಿಕನೊಬ್ಬ ಬಿಎಂಟಿಸಿ ಅಧಿಕೃತ ವೆಬ್ ಸೈಟ್ ನಲ್ಲಿ ದೂರು ನೀಡಿ 25 ರೂಪಾಯಿ ಚಿಲ್ಲರೆಯನ್ನು ಹಿಂಪಡೆದಿದ್ದಾರೆ. ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ ಕಂಡಕ್ಟರ್ 25 ರೂಪಾಯಿ ಚಿಲ್ಲರೆ ಹಿಂದಿರುಗಿಸದ ಕಾರಣ ದೊಡ್ಡಬಳ್ಳಾಪುರದ ನಿವಾಸಿಯಾಗಿರುವ ಗಿರೀಶ್ ಅಧಿಕೃತ ವೆಬ್ ಸೈಟ್ನಲ್ಲಿ ನಡೆದ ಘಟನೆ ಕುರಿತು ದೂರು ನೀಡಿದ್ದರು.
ಪ್ರಯಾಣಿಕ ಗಿರೀಶ್ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಬಿಎಂಟಿಸಿಯ ಒಂದು ದಿನದ ಪಾಸ್ ಹಾಗೂ ಟೋಲ್ ದರ ಸೇರಿ 75 ರೂ. ಆಗಿದ್ದರೆ, ಕಂಡಕ್ಟರ್ಗೆ 100 ಪಾವತಿಸಿ 25 ರೂಪಾಯಿ ಚಿಲ್ಲರೆ ಕೇಳಿದ್ದರು. ಆದಾಗ್ಯೂ, ಅವರು ತಮ್ಮ ಬಾಕಿ ಮೊತ್ತವನ್ನು ಹಿಂದಿರುಗಿಸದ ಕಂಡಕ್ಟರ್ ವಿರುದ್ಧ ಪ್ರಯಾಣಿಕ ಗಿರೀಶ್ ಬಿಎಂಟಿಸಿ ಸಂಸ್ಥೆಗೆ ದೂರು ಸಲ್ಲಿಸಿ ತಮಗೆ ಬರಬೇಕಿದ್ದ ರೂ. 25 ಹಣವನ್ನು ಹಿಂಪಡೆದಿದ್ದಾರೆ. ಬಿಎಂಟಿಸಿ ಸಂಸ್ಥೆಯ ಸ್ಪಂದನೆಗೆ ಪ್ರಯಾಣಿಕ ಗಿರೀಶ್ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿದ ಗಿರೀಶ್, ಬಸ್ನಲ್ಲಿ ಪ್ರಯಾಣಿಸುವಾಗ ಚಿಲ್ಲರೆ ಹಣ ತೆಗೆದುಕೊಂಡು ಹೋಗುವುದು ಪ್ರಯಾಣಿಕನ ಕರ್ತವ್ಯ. ಹಾಗೆಯೇ ಕಂಡಕ್ಟರ್ ಬಳಿ ಚಿಲ್ಲರೆ ಹಣ ಇದ್ದಲ್ಲಿ ಪ್ರಯಾಣಿಕರಿಗೆ ಚಿಲ್ಲರೆ ಹಣ ಕೊಡುವುದು ಅವರ ಕರ್ತವ್ಯ. ಅವರ ಬಳಿ ಚಿಲ್ಲರೆ ಹಣ ಇದ್ದರು ಸಹ ಕೊಡದೆ ಉದಾಸೀನ ವರ್ತನೆ ತೋರಿದ ಹಿನ್ನೆಲೆ ಮತ್ತು 25 ರೂಪಾಯಿ ತಮ್ಮ ದುಡಿಮೆ ಹಣ, ಅದನ್ನು ಕೇಳಿ ಪಡೆಯುವುದು ನಮ್ಮ ಹಕ್ಕು ಸಹ ಆಗಿದೆ ಎಂದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ ಪೊಲೀಸರಿಂದ ಅಟ್ಟಿಕಾ ಬಾಬು ಬಂಧನ - ATTICA BABU ARRESTED