ಬಾಗಲಕೋಟೆ: ''ಕಾಂಗ್ರೆಸ್ ಪಕ್ಷದಿಂದ ತಟಸ್ಥ ಉಳಿದಿದ್ದು, ಯುಗಾದಿ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು'' ಎಂದು ಅಸಮಧಾನಗೊಂಡಿರುವ ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ ತಿಳಿಸಿದರು.
ಅವರು ನವನಗರದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಂಬಲಿಗರ ಸಭೆಯಲ್ಲಿ ನಿರ್ಧಾರ ಪ್ರಕಟಿಸಿದ್ದಾರೆ. ಸಿಎಂ, ಡಿಸಿಎಂ ಭೇಟಿ ಮಾಡಿದ ನಂತರದ ಬೆಳವಣಿಗೆಗಳನ್ನು ತಿಳಿಸುವ ಕೆಲಸ ಮಾಡಿದೆ. ಅನಾರೋಗ್ಯದ ಕಾರಣದಿಂದ ಬಾಗಲಕೋಟೆಗೆ ಬರಲು ಆಗಿರಲಿಲ್ಲ. ಹಿತೈಷಿಗಳು, ಅಭಿಮಾನಿಗಳ ಸಭೆ ಮಾಡಿದ್ದಾರೆ. ಮೂರ್ನಾಲ್ಕು ರೀತಿಯ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೂ ಕೆಲ ಹಿರಿಯರು ಇಂದಿನ ಸಭೆಗೆ ಬಂದಿಲ್ಲ. ಹೀಗಾಗಿ ಇಂದು ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಅಲ್ಲ. ಯುಗಾದಿ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇನೆ'' ಎಂದರು.
''ಬಂಡಾಯ ಅಭ್ಯರ್ಥಿಯಾಗಿ ನಿಲ್ಲಬೇಕೆಂದು ಕೆಲವರು ಅಭಿಪ್ರಾಯ ತಿಳಿಸಿದ್ದಾರೆ. ಇನ್ನೂ ಕೆಲವರು ತಟಸ್ಥರಾಗಿ ಉಳಿಯಿರಿ ಅಂದಿದ್ದಾರೆ. ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿದ್ದೇನೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೂ ನಾನು ತಟಸ್ಥವಾಗಿ ಉಳಿಯುತ್ತೇನೆ'' ಎಂದರು.
''ಇಲ್ಲಿಯವರೆಗೂ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನನ್ನ ನಂಬರ್ ಸಂಯುಕ್ತಾ ಹಾಗೂ ಸಚಿವರಾದ ಶಿವಾನಂದ ಪಾಟೀಲರ ಹತ್ತಿರವೂ ಇದೆ.
ಯಾರೂ ಕೂಡಾ ನನ್ನ ಸಂಪರ್ಕ ಮಾಡಿಲ್ಲ. ಜಿ.ಪಂ ಅಧ್ಯಕ್ಷೆಯಾಗಿದ್ದಾಗ ಶಿವಾನಂದ ಪಾಟೀಲ ಅವರು ಉಸ್ತುವಾರಿ ಸಚಿವರಾಗಿದ್ದರು. ಅಂದಿನಿಂದ ಇಲ್ಲಿಯವರೆಗೆ ನನ್ನ ನಂಬರ್ ಅವರ ಬಳಿ ಇದೆ. ಅವರು ತಮ್ಮನ್ನು ಸಂಪರ್ಕ ಮಾಡಿಲ್ಲ'' ಎಂದು ವೀಣಾ ಕಾಶಪ್ಪನವರ ತಿಳಿಸಿದರು.
ಮಾಸಲಾರದ ನೋವಾಗಿದೆ- ವೀಣಾ: ''ಅಣ್ಣ ಬಂದ ಮೇಲೆ ಅಕ್ಕ ಬಂದೇ ಬರ್ತಾಳೆ ಎಂಬ ಹೇಳುತ್ತಿದ್ದಾರೆ. ಪತಿ (ವಿಜಯಾನಂದ) ಕಾಂಗ್ರೆಸ್ ಶಾಸಕರಾಗಿ ಅವರ ಜವಾಬ್ದಾರಿ ನಿಭಾಯಿಸ್ತಿದಾರೆ. ಅವರ ಜವಾಬ್ದಾರಿಗಳಿಗೆ ನಾನು ಅಡ್ಡಿ ಮಾಡಲ್ಲ. ಇದು ನನಗೆ ಅನ್ಯಾಯ ಆಗಿರೋದು ನನ್ನ ಮನಸ್ಸಿಗೆ ವಿರುದ್ಧವಾಗಿದೆ. ವಿಜಯಾನಂದ ಕಾಶಪ್ಪನವರ ಹುನಗುಂದ ಕ್ಷೇತ್ರದ ಎಂಎಲ್ಎ. ವೀಣಾ ಕಾಶಪ್ಪನವರ ಬಾಗಲಕೋಟೆ ಲೋಕಸಭೆಗೆ ನಿಲ್ಲಬೇಕಾದ ಅಭ್ಯರ್ಥಿ. ಗೆದ್ದಲು ಹುಳು ಕಟ್ಟಿದ ಹಾಗೆ ನಾನು ಸಂಘಟನೆಯನ್ನು ಇಂಚಿಂಚು ಕಟ್ಟಿದ್ದೀನಿ. ರೈತನ ಬೆಳೆ ಒಮ್ಮೆ ನಾಶ ಆದಾಗ ಆಗುವ ನೋವು ನನಗಾಗಿದೆ. ಅದು ಮಾಸಲಾರದ ನೋವಾಗಿದೆ'' ಎಂದು ವೀಣಾ ಕಾಶಪ್ಪನವರ ತಮ್ಮ ಅಸಮಾಧಾನವನ್ನು ತೋಡಿಕೊಂಡರು.
''ಜಿಲ್ಲೆಗೆ ಸಂಯುಕ್ತಾ ಪಾಟೀಲ ಅವರ ಕೊಡುಗೆ ಏನೂ ಇಲ್ಲ. ಜಿಲ್ಲೆಯ ಜನರು ನನ್ನನ್ನು ಮನೆ ಮಗಳಂತೆ ನೋಡಿದ್ದಾರೆ. ಆ ಜನತೆ ಕೂಡಾ ನೋವು ಅನುಭವಿಸುತ್ತಿದ್ದಾರೆ'' ಎಂದ ಅವರು, ನಾನು ಕಾಂಗ್ರೆಸ್ ಪಕ್ಷವನ್ನು ವಿರೋಧ ಮಾಡುತ್ತಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಮುಖಂಡರನ್ನು ವಿರೋಧ ಮಾಡುತ್ತಿದ್ದೇನೆ. ಜಿಲ್ಲೆಗೆ ವೀಕ್ಷಕರಾಗಿ ಬಂದಾಗ 11 ಜನರು ಆಕಾಂಕ್ಷೆ ಪಟ್ಟಿ ನೀಡಿದ್ದರು. ಅದರಲ್ಲಿ ನಾಲ್ಕು ಜನರ ಹೆಸರು ಇಲ್ಲಿನ ಜಿಲ್ಲಾಧ್ಯಕ್ಷರು ರಾಜ್ಯ ಮಟ್ಟಕ್ಕೆ ಕಳಿಸಿದ್ದಾರೆ. ಆದರೆ, ಕಮಿಟಿ ಅವರು ಒಂದೇ ಹೆಸರು ಕಳಿಸಿದ್ದು, ನೋವಾಗಿದೆ'' ಎಂದು ಅಸಮಾಧಾನ ಹೂರಹಾಕಿದರು.
ಇದನ್ನೂ ಓದಿ: "ಪ್ರಿಯಾಂಕಾ ಜಾರಕಿಹೊಳಿ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ": ಲಕ್ಷ್ಮಣ ಸವದಿ - Laxman Savadi