ಮೈಸೂರು: ಕತ್ತು ಕೊಯ್ದ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ವ್ಯಕ್ತಿಯೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಲ್ಕುಂಡಿ ಗ್ರಾಮದ ಸದಾಶಿವ(43) ಮೃತ ವ್ಯಕ್ತಿ.
ದೇಹ ಪತ್ತೆಯಾದ ಜಾಗದಲ್ಲಿ ರಕ್ತ ಚೆಲ್ಲಾಡಿದ್ದು, ಎಲೆ ಮತ್ತು ಅಡಿಕೆ ಹಾಗೂ 101 ರೂ. ಹಣವನ್ನು ಇಡಲಾಗಿತ್ತು. ನಿಂಬೆಹಣ್ಣುಗಳು ಕೂಡ ಸ್ಥಳದಲ್ಲಿ ಸಿಕ್ಕಿವೆ. ವಾಮಾಚಾರ ನಡೆಸಿ ಕೊಲೆ ಮಾಡಿದ್ದಾರೆಂದು ಶಂಕಿಸಿ ಮೃತನ ಪತ್ನಿ ರಾಜೇಶ್ವರಿ ಹಾಗೂ ಅವರ ಸಂಬಂಧಿಕರು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ: ಮಡುವಿನಹಳ್ಳಿ ಗ್ರಾಮದ ಪ್ರೌಢ ಶಾಲೆಯ ಸಮೀಪ ನೀರು ಹರಿಯುವ ಹಳ್ಳದಲ್ಲಿ ನರಳಾಡುತ್ತಿದ್ದ ದೃಶ್ಯ ಸ್ಥಳೀಯರೊಬ್ಬರ ಕಣ್ಣಿಗೆ ಬಿದ್ದಿದೆ. ತಕ್ಷಣ ಅವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಪಿಎಸ್ಐ ಚೇತನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.
ನರಳಾಡುತ್ತಿದ್ದ ಸದಾಶಿವನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಮಾರ್ಗಮಧ್ಯೆ ಸದಾಶಿವ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿವೈಎಸ್ಪಿ ರಘು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
'ವಾಮಾಚಾರ ಮಾಡಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತಪಡಿಸಿ ಮೃತನ ಪತ್ನಿ ಹಾಗೂ ಅವರ ಸಂಬಂಧಿಕರು ಈ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೊಣ್ಣೆಯಿಂದ ಹೊಡೆದು ಒಂದೇ ಕುಟುಂಬದ ಐವರ ಕೊಲೆ; ವಾಮಾಚಾರ ಶಂಕೆಯಿಂದ ಹತ್ಯೆಗೈದ ಆರೋಪಿಗಳು ಅಂದರ್ - MURDER CASE