ದಾವಣಗೆರೆ: ಅಕ್ರಮ ಸಂಬಂಧ ಶಂಕೆ ಮೇರೆಗೆ ಪತ್ನಿಯ ಸ್ನೇಹಿತನನ್ನು ರಸ್ತೆಯಲ್ಲೇ ಹತ್ಯೆಗೈದ ವ್ಯಕ್ತಿ, ಬಳಿಕ ಮನೆಯಲ್ಲಿ ಪತ್ನಿಯನ್ನು ಕೊಲೆಗೈಯುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮಾಡುವಷ್ಟರಲ್ಲಿ ಪೊಲೀಸರ ಜೊತೆ ಶ್ವಾನ ಎಂಟ್ರಿ ಕೊಟ್ಟಿದೆ. ಇದರಿಂದಾಗಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂತೆಬೆನ್ನೂರು ತಾಲೂಕಿನ ಬಾಡಾ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಸೋಮವಾರ ಸಂತೋಷ್ (33) ಹತ್ಯೆಯಾಗಿದೆ. ರಂಗಸ್ವಾಮಿ ಕೊಲೆಗೈದ ಆರೋಪಿ. ವಿಶೇಷವೆಂದರೆ, ಪೊಲೀಸ್ ಶ್ವಾನ ಆರೋಪಿಯನ್ನು 8 ಕಿಮೀ ದೂರದವರೆಗೂ ವಾಸನೆಯನ್ನು ಬೆನ್ನತ್ತಿ ಬಂದಿತ್ತು.
ಪ್ರಕರಣದ ವಿವರ: ಹತ್ಯೆಯಾದ ಸಂತೋಷ್ ಗಾರೆ ಕೆಲಸ ಮಾಡಿಕೊಂಡಿದ್ದರು. ಈತ ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ರಂಗಸ್ವಾಮಿ ಶಂಕಿಸಿ ಸೋಮವಾರ ರಾತ್ರಿ 9:45ಕ್ಕೆ ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ರಂಗಸ್ವಾಮಿ ನೇರವಾಗಿ ಚನ್ನಾಪುರದ ತನ್ನ ಮನೆಗೆ ತೆರಳಿ ಪತ್ನಿಯ ಮೇಲೂ ಹಲ್ಲೆ ಮಾಡಿ ಕೊಲೆಗೈಯುಷ್ಟರಲ್ಲಿ ಪೊಲೀಸರು ಆಗಮಿಸಿದ್ದಾರೆ.
ಪ್ರಾಣ ಉಳಿಸಿದ ಶ್ವಾನ ತುಂಗಾ 2: ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು, ಆರೋಪಿ ಪತ್ತೆಗೆ ಶ್ವಾನದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದರು. ವಾಸನೆ ಹಿಡಿಯುತ್ತ ಶ್ವಾನವೂ ಆರೋಪಿಯ ಮನೆಗೆ ಪೊಲೀಸರನ್ನು ಕರೆದೊಯ್ದಿದೆ. ಆ ವೇಳೆಗೆ ಪತ್ನಿ ಮೇಲೆ ಮನಬಂದಂತೆ ಹಲ್ಲೆ ನಡೆಸುತ್ತಿದ್ದ ಪತಿ ರಂಗಸ್ವಾಮಿಯನ್ನು ತಕ್ಷಣ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಶ್ವಾನದ ಕ್ಷೀಪ್ರ ಕಾರ್ಯಾಚರಣೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದು, "ತನ್ನ ಪತ್ನಿ ಜೊತೆ ಸಂತೋಷ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಮೇರೆಗೆ ಕೊಲೆ ಮಾಡಿರುವುದಾಗಿ ವಿಚಾರಣೆಯ ವೇಳೆ ಆರೋಪಿ ರಂಗಸ್ವಾಮಿ ಒಪ್ಪಿಕೊಂಡಿದ್ದಾನೆ. ಸಂತೋಷ್ ಕೊಲೆ ಮಾಡಿದ ಬಳಿಕ ಮನೆಗೆ ತೆರಳಿ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಶ್ವಾನ ತುಂಗಾ -2 ಕೊಲೆಯಾದ ಸ್ಥಳದಲ್ಲಿ ವಾಸನೆ ಹಿಡಿದು ಆರೋಪಿಯ ಮನೆಯು 8 ಕಿಮೀ ದೂರವಿದ್ದರೂ, ಪತ್ತೆ ಮಾಡಿದೆ. ಈ ವೇಳೆ ಆರೋಪಿ ಪತ್ನಿಯ ಕೈಯನ್ನು ಮುರಿದು ಹಲ್ಲೆ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ" ಎಂದು ಮಾಹಿತಿ ನೀಡಿದರು.
"ತನ್ನ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ಮಾಡಿರುವುದಾಗಿಯೂ ಆರೋಪಿ ಒಪ್ಪಿಕೊಂಡಿದ್ದಾನೆ. ಇನ್ನು ಸಂತೋಷ್ ಕೊಲೆ ವೇಳೆ ರಂಗಸ್ವಾಮಿ ಜೊತೆ ತೆರಳಿದ್ದ ಗೆಳೆಯರಾದ ಹನುಮಂತಪ್ಪ, ಮಹಾರುದ್ರಪ್ಪ ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿದೆ. ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ಎಸ್ಪಿ ಉಮಾಪ್ರಶಾಂತ್ ತಿಳಿಸಿದರು.
ಸಂತೆಬೆನ್ನೂರಿನಲ್ಲಿ ಸಂತೋಷನ ಬರ್ಬರ ಹತ್ಯೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಮನೆಗೆ ಆಧಾರವಾಗಿದ್ದ ಸಂತೋಷ್ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಈಗಾಗಲೇ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಗಳ ಸಿಸಿಟಿವಿ ದೃಶ್ಯಗಳು FSL, CID ತಾಂತ್ರಿಕ ಘಟಕಕ್ಕೆ ರವಾನೆ - Darshan Case