ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಮಳೆ ಬಂದ ಕಾರಣ ಮನೆ ಮುಂದೆ ಒಣ ಹಾಕಿದ್ದ ಅಡಕೆ ತೆಗೆಯುವ ವೇಳೆ ಸಿಡಿಲು ಬಡಿದು 10 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದರ್ (34) ಮೃತರು. ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಆರಂಭಕ್ಕೂ ಮೊದಲು ಗಾಳಿ, ಗುಡುಗು ಆರಂಭಗೊಂಡಿತ್ತು. ಈ ವೇಳೆ, ಮನೆಯಂಗಳದಲ್ಲಿ ಒಣಗಿಸಲು ಹಾಕಲಾಗಿದ್ದ ಅಡಕೆಯನ್ನು ಸೋಮಸುಂದರ್ ಅವರು ತೆಗೆಯುವ ವೇಳೆ ಸಿಡಿಲು ಬಡಿದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಸೋಮ ಸುಂದರ್ ಅವರು ಸುಬ್ರಹ್ಮಣ್ಯ ಸಮೀಪ ಕಾರ್ ವಾಷಿಂಗ್ ಉದ್ಯಮ ನಡೆಸಿಕೊಂಡಿದ್ದು, 10 ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೃತರು ತಾಯಿ, ತಂಗಿ, ಪತ್ನಿಯನ್ನು ಅಗಲಿದ್ದಾರೆ. ಮೃತರ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ದಾವಣಗೆರೆ: ಗಾಳಿ-ಮಳೆಗೆ ಬಾಳೆ, ಪಪ್ಪಾಯಿ ಗಿಡಗಳು ನಾಶ; ಧರೆಗುರುಳಿದ ಅಡಿಕೆ ಮರಗಳು - Crop Destroy
ಹೊಸಕೋಟೆಯಲ್ಲಿ ಓರ್ವ ಮಹಿಳೆ ಸಾವು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಕೆಲವೆಡೆ ಶುಕ್ರವಾರ ಮಳೆಯಾಗಿದೆ. ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದಲ್ಲಿ ಈ ವೇಳೆ ಸಿಡಿಲು ಬಡಿದು ಓರ್ವ ಮಹಿಳೆ ಹಾಗೂ 20ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿವೆ. ಗಣಗಲು ಗ್ರಾಮದ ರತ್ನಮ್ಮ ಮೃತರು. ಶುಕ್ರವಾರ ಮಧ್ಯಾಹ್ನ ಗಾಳಿ ಸಹಿತ ಮಳೆ ಆರಂಭವಾತ್ತು. ಬೇವಿನ ಮರದಡಿ ಮೇಕೆಗಳ ಜೊತೆ ರತ್ನಮ್ಮ ರಕ್ಷಣೆಗೆಂದು ನಿಂತಿದ್ದರು. ಆಗ ಸಿಡಿಲು ಬಡಿದಿದ್ದು, ಮಹಿಳೆ ಮತ್ತು ಮೇಕೆಗಳು ಮೃತಪಟ್ಟಿವೆ. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಗಂಗಾವತಿ: ಸಿಡಿಲು ಬಡಿದು ದುರ್ಗಾದೇವಿ ದೇವಸ್ಥಾನದ ಗೋಪುರಕ್ಕೆ ಹಾನಿ - temple tower damaged