ರಾಯಚೂರು: ಆತ ಕೂಲಿ ಕೆಲಸ ಮಾಡುವ ಬಡ ಯುವಕ, ತಾನು ದುಡಿದಿದ್ದರಲ್ಲೇ ಸ್ವಲ್ಪ ಹಣ ಉಳಿತಾಯ ಮಾಡಿ ಜೀವನ ಸಾಗಿಸುತ್ತಿದ್ದಾನೆ. ಆದರೆ ತನ್ನ ದುಡಿಮೆಯಿಂದ ಬಂದ ಹಣವನ್ನ ಜಮಾ ಇಟ್ಟು, ನಿತ್ಯ ಮೂರ್ನಾಲ್ಕು ಕಿಲೋ ಮೀಟರ್ ನಡೆದುಕೊಂಡು ಹೋಗುವ ಬಡ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಜಿಲ್ಲೆಯ ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಲ್ಕಂದಿನ್ನಿ ಗ್ರಾಮದ ಯುವಕ ಆಂಜಿನೇಯ್ಯ ಯಾದವ್ ಈ ಸಾಮಾಜಿಕ ಕಾರ್ಯ ಮಾಡಿದ್ದಾರೆ. ಮಲ್ಕಂದಿನ್ನಿ ಗ್ರಾಮದಲ್ಲಿ 1ರಿಂದ 5ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಲಿಕ್ಕೆ ಅವಕಾಶವಿದೆ. ಆದ ನಂತರ ಹೆಚ್ಚಿನ ಅಭ್ಯಾಸಕ್ಕೆ ಪಕ್ಕದ ಯಮನೂರು ಪ್ರೌಢಶಾಲೆಗೆ ತೆರಳಬೇಕು. ಹೀಗೆ ತಮ್ಮ ಗ್ರಾಮದಿಂದ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವುದನ್ನ ಆಂಜಿನೇಯ್ಯ ಗಮನಿಸಿದ್ದಾರೆ. ಆಗ ತನ್ನಿಂದ ಮಕ್ಕಳಿಗೆ ಏನಾದರೂ ಸಹಾಯ ಮಾಡಬೇಕು ಎಂದು ಯೋಚಿಸಿದ್ದಾರೆ. ಹೀಗಾಗಿ ತಾನು ಕೂಲಿ ಕೆಲಸ ಮಾಡಿ ಬಂದ ಸಾವಿರಾರು ರೂಪಾಯಿ ಹಣದಿಂದಲೇ ಒಂದು ಎರಡಲ್ಲ, ಬರೊಬ್ಬರಿ 11 ಸೈಕಲ್ ಅನ್ನು ಆಂಜಿನೇಯ್ಯ ಕೊಡಿಸಿದ್ದಾರೆ. ಈ ಒಂದು ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
40 ಸಾವಿರ ಕೂಡಿಸಿ 11 ಸೈಕಲ್ ವಿತರಣೆ: ಯುವಕ ಆಂಜಿನೇಯ್ಯ, ಮೇಸ್ತ್ರಿ ಕೆಲಸ, ಡ್ರೈವರ್ ಹಾಗೂ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಂದಲ್ಲ ಒಂದು ಕೆಲಸ ಮಾಡಿಕೊಂಡು ತನ್ನ ಜೀವನದ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ಕೊಡಿಸುವ ಸಲುವಾಗಿ 40 ಸಾವಿರ ರೂಪಾಯಿ ಹಣ ಜಮಾ ಇಟ್ಟು, ಆ ಹಣದಿಂದಲೇ ಒಟ್ಟು 11 ಸೈಕಲ್ ಖರೀದಿ ಮಾಡಿದ್ದಾರೆ. ಈ ಸೈಕಲ್ಗಳನ್ನು ತನ್ನ ಗ್ರಾಮದಿಂದ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದ್ದಾರೆ.
ತಮ್ಮ ಗ್ರಾಮದ ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೋಗುವುದನ್ನ ಮೊದಲು ಗಮನಿಸಿದೆ. ನನ್ನಿಂದ ಸಹಾಯ ಮಾಡಬೇಕು ಎಂದು ತಿಳಿದುಕೊಂಡೆ. ಆಮೇಲೆ ವಿದ್ಯಾರ್ಥಿಗಳಿಗೆ ಸೈಕಲ್ ಕೊಡಿಸಬೇಕು ಎಂದು ತಿರ್ಮಾನಿಸಿದೆ. ನಂತರ ನಿತ್ಯ ನನ್ನ ದುಡಿಮೆಯಿಂದ ಬಂದ ಹಣದಲ್ಲಿ ಸ್ವಲ್ಪ ಮೊತ್ತ ಸಂಗ್ರಹಿಸಿ ಇಡುತ್ತಿದ್ದೆ. ಹೀಗೆ ಸುಮಾರು 40 ಸಾವಿರ ರೂಪಾಯಿಗೂ ಹೆಚ್ಚು ಹಣವನ್ನ ಸಂಗ್ರಹಿಸಿದ್ದೇನೆ. ಹಣ ಸಂಗ್ರಹವಾದ ಬಳಿಕ ದೇವದುರ್ಗ ಪಟ್ಟಣದಲ್ಲಿ ಒಟ್ಟು 11 ಸೈಕಲ್ ಖರೀದಿ ಮಾಡಿ, ಗ್ರಾಮದಿಂದ ತೆರಳುತ್ತಿದ್ದ 11 ವಿದ್ಯಾರ್ಥಿಗಳು ವಿತರಿಸಿದ್ದಾರೆ ಎಂದು ಯುವಕ ಆಂಜಿನೇಯ್ಯ ಹೇಳಿದರು.
ಶಿಕ್ಷಣ ನಿಲ್ಲಬಾರದೆಂಬ ಕಾರಣಕ್ಕೆ ಈ ನಿರ್ಧಾರ: ಸಾರಿಗೆ ಸೌಲಭ್ಯ ಇಲ್ಲದೇ ಹಳ್ಳಿಗಳಿಂದ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ತೆರಳುವುದು ತುಂಬಾ ಕಷ್ಟದಾಯಕವಾಗಿದೆ. ನಿತ್ಯ ನಡೆದುಕೊಂಡು ಶಾಲೆಗೆ ಹೋಗುವ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯ. ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳು ಸಾರಿಗೆ ವ್ಯವಸ್ಥೆಯಿಲ್ಲದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗೊಂಡು ನಮ್ಮೂರಿನ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ನೀಡಿದ್ದೇನೆ ಎಂದು ಹೇಳಿದ್ದಾರೆ ಆಂಜಿನಯ್ಯ ಯಾದವ್.
ಇನ್ನು ತಮ್ಮೂರಿನ ಯುವಕನ ಸಾಮಾಜಿಕ ಕಾರ್ಯವನ್ನು ಮೆಚ್ಚಿ ಗ್ರಾಮಸ್ಥರು ಸನ್ಮಾನಿಸಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಸೌಲಭ್ಯ ದೊರೆಯದೇ ನಡೆದುಕೊಂಡು ಹೋಗುವ ಪರಿಸ್ಥಿತಿಯಿದ್ದು, ಸಮರ್ಪಕವಾಗಿ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದಕ್ಕೆ ಇಂತಹ ಘಟನೆಗಳು ಕೈಗನ್ನಡಿಯಾಗಿವೆ. ಗ್ರಾಮದಲ್ಲಿರುವ ಆಂಜಿನೇಯ್ಯ ಸ್ವಾಮಿ ದೇವರು ಊರು ಕಾಯುತ್ತಾನೆ ಎಂದು ಗ್ರಾಮೀಣ ಪ್ರದೇಶದಲ್ಲಿ ಮಾತನಾಡಿಕೊಳ್ಳುತ್ತಾರೆ. ಮಲ್ಕಂದಿನ್ನಿ ಗ್ರಾಮದ ಬಡ ಆಂಜಿನೇಯ್ಯ ತಮ್ಮೂರಿನ ಮಕ್ಕಳಿಗೆ ಸೈಕಲ್ ನೀಡುವ ತನ್ನ ಹೃದಯ ವೈಶ್ಯಾಲತೆ ಮೆರೆದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಓದಿ: ಕೆಲಸದ ಮೇಲೆ ಶ್ರದ್ಧೆ- ಪ್ರೀತಿ: ಮನೆ ಮೇಲೆ ಬಸ್ ನಿರ್ಮಿಸಿದ ನಿವೃತ್ತ ಸಾರಿಗೆ ನೌಕರ