ಚಿಕ್ಕಮಗಳೂರು : ಕಳೆದ 8 ದಿನಗಳಿಂದ ಚಿಕ್ಕಮಗಳೂರಿನಲ್ಲಿ ಆನೆ ಬೀಟಮ್ಮ ಅಂಡ್ ಗ್ಯಾಂಗ್ನ ಸದ್ದು ಹೆಚ್ಚಾಗುತ್ತಿದೆ. ಇದು ಜಿಲ್ಲೆಯ ಸುತ್ತ ಮುತ್ತಲ ಜನರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಬೀಟಮ್ಮ ಗ್ಯಾಂಗ್ನಲ್ಲಿ ಒಟ್ಟು 25ಕ್ಕೂ ಹೆಚ್ಚು ಕಾಡಾನೆಗಳು ಇದ್ದು, ಇದೀಗ ಚಿಕ್ಕಮಗಳೂರು ತಾಲೂಕಿನ ಕೆರೆ ಮಕ್ಕಿಯಿಂದ ಆವತಿ ಭಾಗದ ಕಡೆ ಪ್ರಯಾಣ ಬೆಳೆಸಿದೆ. ಈಗ ಮಸಗಲಿ ಗ್ರಾಮದ ಕಡೆ ಹೋಗುವ ಬೆಟ್ಟವನ್ನು ಈ ಗ್ಯಾಂಗ್ ಏರುತ್ತಿದ್ದು, ಒಂದರ ಹಿಂದೆ ಒಂದು ಹಿಂಬಾಲಿಸಿಕೊಂಡು ಗಜಪಡೆ ಹೋಗಲು ಪ್ರಾರಂಭ ಮಾಡಿದೆ.
ಕಾಡಾನೆಗಳ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಹೆಚ್ಚಾಗಿದೆ. 3 ದಿನದ ಹಿಂದೆ ಕಾಫಿ ತೋಟದ ಮಾಲೀಕರು ತಮ್ಮ ಕಾರ್ಮಿಕರಿಗೆ ರಜೆ ಘೋಷಣೆ ಮಾಡಿದ್ದು, ಮನೆಯಿಂದ ಹೊರ ಬರಲು ಸ್ಥಳೀಯರು ಹಿಂದೇಟು ಹಾಕುತ್ತಿದ್ದಾರೆ.
ತೋರಣ ಮಾವು, ಕೆರೆಮಕ್ಕಿ, ಹುಣಸೆ ಮಕ್ಕಿ, ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಗಜ ಪಡೆಗಳ ಸಂಚಾರ ಜೋರಾಗಿ ನಡೆಯುತ್ತಿದೆ. ಸುತ್ತ ಮುತ್ತಲ ಗ್ರಾಮದ ಜನ ಎಚ್ಚರಿಕೆಯಿಂದ ಇರಲು ಅರಣ್ಯ ಇಲಾಖೆ ಸೂಚನೆ ನೀಡಿದೆ. ಕಳೆದ ಮೂರು ದಿನದ ಹಿಂದೆಯೇ ಈಗಾಗಲೇ ಈ ಭಾಗದಲ್ಲಿ ಮೈಕ್ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಿದ್ದು, ಕಳೆದ ಎಂಟು ದಿನಗಳಿಂದ ತಮ್ಮ ಮನೆ ಬಿಟ್ಟು, ಬೀಟಮ್ಮ ಗ್ಯಾಂಗ್ಅನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಯುವಂತಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು : ಮುಂದುವರೆದ ಒಂಟಿ ಸಲಗ, ಬೀಟಮ್ಮ ಗ್ಯಾಂಗ್ ಉಪಟಳ; ಜನರಲ್ಲಿ ಭೀತಿ