ಬೆಂಗಳೂರು: ಮಣ್ಣಿನ ಧೂಳು ಎದ್ದಿರುವುದಾಗಿ ಆರೋಪಿಸಿ ನಡೆದ ಜಗಳದಲ್ಲಿ ವ್ಯಕ್ತಿಯೋರ್ವ ಹತ್ಯೆಯಾಗಿರುವ ಘಟನೆ ಶುಕ್ರವಾರ ರಾತ್ರಿ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ನಡೆದಿದೆ. ಲಿಂಗಮೂರ್ತಿ ಎಂಬುವರು ಕೊಲೆಯಾದ ವ್ಯಕ್ತಿ.
ಲಾರಿ ಮೂಲಕ ಮರಳು ಸಾಗಾಟ ಕೆಲಸ ಮಾಡುತ್ತಿದ್ದ ಲಿಂಗಮೂರ್ತಿ ಅವರು ಹೆಮ್ಮಿಗೆಪುರದಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಖಾಲಿ ಜಾಗದಲ್ಲಿ ಮಣ್ಣು ಅನ್ಲೋಡಿಂಗ್ ಮಾಡಿದ್ದರು. ಈ ವೇಳೆ ಧೂಳು ಹೆಚ್ಚಾಗಿದೆ ಎಂದು ಆರೋಪಿ ಚಿರಂಜೀವಿ ಎಂಬಾತ ಕ್ಯಾತೆ ತೆಗೆದಿದ್ದಾನೆ. ಇಬ್ಬರ ನಡುವೆ ಮಾತಿನ ಸಂಘರ್ಷ ಹೆಚ್ಚಾಗಿ ವಿಕೋಪಕ್ಕೆ ಹೋಗಿದೆ. ಚಿರಂಜೀವಿ ಸಮೀಪದ ಚಿಕನ್ ಅಂಗಡಿಯೊಂದರಲ್ಲಿದ್ದ ಚಾಕು ತೆಗೆದುಕೊಂಡು ಬಂದು ಲಿಂಗಮೂರ್ತಿಗೆ ಚುಚ್ಚಿದ್ದಾನೆ. ಲಿಂಗಮೂರ್ತಿ ತೀವ್ರ ರಕ್ತಸ್ರಾವವಾಗಿ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.
ಬಂಧನ ಭೀತಿಯಿಂದ ಆರೋಪಿ ಪರಾರಿ ಆಗಿದ್ದು, ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ಮದುವೆ ಆಗಬೇಕಿದ್ದ ಯುವಕನ ಮೈಮೇಲೆ ಬೊಲೆರೋ ಚಲಾಯಿಸಿ ಕೊಲೆ; ಕಾರಣ? - Youth Murdered