ಬೆಂಗಳೂರು: ಕ್ರಿಕೆಟ್ ಆಡುತ್ತಿದ್ದ ಮೈದಾನದಲ್ಲಿ ಫಾನ್ಸ್ ವಾರ್ ನಡೆದಿದೆ. ನಟನನ್ನ ಹೀಯಾಳಿಸಿದ ಎಂಬ ಆರೋಪದಡಿ ಯುವಕನ ಮೇಲೆ ಮತ್ತೋರ್ವ ನಟನ ಅಭಿಮಾನಿಗಳ ಗುಂಪು ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿಯ ಆಟದ ಮೈದಾನದಲ್ಲಿ ನಡೆದಿದೆ.
ಯುವಕನ ಮೇಲೆ ಆರೇಳು ಮಂದಿ ಗುಂಪು ಹಲ್ಲೆ ಮಾಡುತ್ತಿದ್ದು, ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ನಗರ ಪೊಲೀಸರ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಈ ಬಗ್ಗೆ ಕೆ.ಆರ್.ಪುರ ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ ಪೋಸ್ಟ್ ಮಾಡಿದ ಮಾಹಿತಿ ಆಧರಿಸಿ ಕ್ರಮ ಕೈಗೊಂಡಿದ್ದಾರೆ.
ನಿನ್ನೆ ಮೇಡಹಳ್ಳಿ ಸಮೀಪದ ಆಟದ ಮೈದಾನವೊಂದರಲ್ಲಿ ಕ್ರಿಕೆಟ್ ಆಡುವಾಗ ತೆಲುಗು ನಟನ ಅಭಿಮಾನಿಗಳಿಗೂ ಹಾಗೂ ಮತ್ತೊಬ್ಬ ತೆಲುಗು ನಟ ಅಭಿಮಾನಿಗೂ ಫಾನ್ಸ್ ವಾರ್ ಆಗಿದೆ. ನೋಡು ನೋಡುತ್ತಿದ್ದಂತೆ ಯುವಕನ ಮೇಲೆ ಆರೇಳು ಜನರ ಗುಂಪೊಂದು ಕೈಯಿಂದ ಹೊಡೆದು ಹಲ್ಲೆ ಮಾಡಿದೆ. ಯುವಕನಿಗೆ ಹೊಡೆಯುವುದು, ಬೆದರಿಸಿರುವುದು ಮತ್ತು ಆ ನಟನಿಗೆ ಜೈಕಾರ ಹಾಕುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಸಂಬಂಧ ಹಲ್ಲೆಗೊಳಗಾದ ಯುವಕನನ್ನ ಸಂಪರ್ಕಿಸಿದ ಪೊಲೀಸರು ದೂರು ನೀಡುವಂತೆ ಹೇಳಿದ್ದಾರೆ. ಇದಕ್ಕೆ ಯುವಕ ಒಪ್ಪಿಗೆ ನೀಡಲಿಲ್ಲ. ಪರಿಚಯಸ್ಥ ಹುಡುಗರೊಂದಿಗೆ ಜಗಳವಾಗಿದ್ದು, ಘಟನೆ ಬಳಿಕ ರಾಜಿಯಾಗಿದ್ದೇವೆ. ಹೀಗಾಗಿ ದೂರು ನೀಡುವುದಿಲ್ಲ ಎಂದು ಯುವಕ ತಿಳಿಸಿದ್ದು, ಒಂದು ವೇಳೆ ದೂರು ನೀಡಿದರೆ ಕಾನೂನುಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಓದಿ: 'ಇದು ಕ್ಲಾಸ್ರೂಮ್ ಅಲ್ಲ ಬೆಡ್ರೂಮ್': ಸರ್ಕಾರಿ ಶಾಲೆಯೇ ಶಿಕ್ಷಕಿಯ ನಿವಾಸ!