ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಭದ್ರತಾ ಲೋಪವಾಗಿದೆ. ಬ್ಯಾಟಿಂಗ್ ಮಾಡಲು ವಿರಾಟ್ ಕೊಹ್ಲಿ ಕ್ರೀಸ್ಗೆ ಬರುತ್ತಿದ್ದಂತೆ ಅಭಿಮಾನಿಯೊಬ್ಬ ಭದ್ರತಾ ಗೆರೆ ದಾಟಿ ಮೈದಾನದೊಳಗೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದು ಅಭಿಮಾನ ಮೆರೆದಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಕ್ರೀಡಾಂಗಣದಿಂದ ಕರೆದೊಯ್ದು ಪೊಲೀಸ್ ಸುಪರ್ದಿಗೆ ಒಪ್ಪಿಸಿದ್ದಾರೆ.
ವಿಚಾರಣೆ ನಡೆಸಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ಮೈದಾನದೊಳಗೆ ನುಗ್ಗಿದವ 17 ವರ್ಷದ ಬಾಲಕನಾಗಿದ್ದು ಆರ್‌ಸಿಬಿ ಪಂದ್ಯ ನೋಡಲು ರಾಯಚೂರಿನಿಂದ ರೈಲಿನಲ್ಲಿ ಆಗಮಿಸಿದ್ದ ಎಂದು ತಿಳಿಸಿದ್ದಾರೆ. ವಿರಾಟ್ ಕೊಯ್ಲಿ ಹುಚ್ಚು ಅಭಿಮಾನಿಯಾಗಿರುವ ಈತ ಈ ಪಂದ್ಯ ನೋಡಲು 3 ಸಾವಿರ ರೂಪಾಯಿ ಕೊಟ್ಟು ಡಿ ಬ್ಲಾಕ್ ಟಿಕೆಟ್ ಖರೀದಿಸಿದ್ದನಂತೆ.
ಮೈದಾನದಲ್ಲಿ ತನ್ನ ಹಿಂಬದಿ ಸೀಟ್ನಲ್ಲಿರುವವರು ವಿರಾಟ್ನನ್ನು ಹೋಗಿ ಹಿಡಿದುಕೋ ಎಂದು ಕೂಗುತ್ತಿದ್ದರು. ಹೀಗಾಗಿ ತಾನು ಗ್ರಿಲ್ ಹಾರಿ ಮೈದಾನದೊಳಗೆ ಹೋಗಿ ವಿರಾಟ್ ಕಾಲು ಹಿಡಿದಿದ್ದಾಗಿ ಆತ ಹೇಳಿದ್ದಾನೆ. ಕರ್ತವ್ಯಕ್ಕೆ ಅಡ್ಡಿ, ಮೈದಾನದಲ್ಲಿ ಅತಿಕ್ರಮಣ ಪ್ರವೇಶದಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕಿಂಗ್ಸ್ ಮಣಿಸಿದ 'ಕಿಂಗ್': ಕೊಹ್ಲಿ ಅಬ್ಬರಕ್ಕೆ ಶರಣಾದ ಪಂಜಾಬ್, ಗೆಲುವಿನ ಖಾತೆ ತೆರೆದ ಆರ್‌ಸಿಬಿ - RCB Victory
ನಿನ್ನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆಲುವಿನ ಖಾತೆ ತೆರೆಯಿತು. ಪಂಜಾಬ್ ನೀಡಿದ್ದ 176 ರನ್‌ಗಳ ಗುರಿಯನ್ನು 19.2 ಓವರ್ಗಳಲ್ಲಿ ತಲುಪುವ ಮೂಲಕ ಗೆದ್ದು ಬೀಗಿತು.
ವಿರಾಟ್ ಕೊಹ್ಲಿ ಬಿರುಸಿನ ಆಟವಾಡಿ ಅರ್ಧಶತಕ ಸಿಡಿಸಿದರು. ಕೊನೆಯ ಹಂತದಲ್ಲಿ ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಫಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ ಈ ಋತುವಿನಲ್ಲಿ ಮೊದಲ ಜಯಭೇರಿ ಬಾರಿಸಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು.
ಇದನ್ನೂ ಓದಿ: ಆರ್‌ಸಿಬಿ ಗೆಲುವಿಗಾಗಿ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳಿಂದ ಭರ್ಜರಿ ಸಾಂಗ್ಸ್ - RCB SONG