ಬೆಳಗಾವಿ: ವೃತ್ತಿಯಲ್ಲಿ ಪತ್ರಕರ್ತ, ಪ್ರವೃತ್ತಿಯಲ್ಲಿ ಗಣೇಶ ಮೂರ್ತಿ ಮಾಡುವವರು. ಕುಲಕಸುಬು ಬಿಡದ 4ನೇ ತಲೆಮಾರು. ಪುತ್ರನ ಕಾರ್ಯಕ್ಕೆ ಇಳಿ ವಯಸ್ಸಿನ ತಂದೆ ಮತ್ತು ಕುಟುಂಬಸ್ಥರು ಕೂಡ ಸಾಥ್ ನೀಡುತ್ತಿದ್ದಾರೆ. ಅದರಲ್ಲೂ ಮಣ್ಣಿನ ಮೂರ್ತಿಗಳನ್ನೇ ತಯಾರಿಸುತ್ತಾ, ಪರಿಸರ ಪ್ರೇಮ ಮೆರೆಯುತ್ತಿದೆ ಈ ಕುಂಟುಂಬ.
ಎಲ್ಲೆಲ್ಲೂ ಪಿಒಪಿ ಗಣೇಶನ ಮೂರ್ತಿಗಳೇ ರಾರಾಜಿಸುತ್ತಿವೆ. ಮಣ್ಣಿನ ಗಣಪಗಳು ಕಾಣಸಿಗೋದು ತೀರಾ ಅಪರೂಪ. ಸರ್ಕಾರದ ಕಟ್ಟುನಿಟ್ಟಿನ ಆದೇಶ ಕೇವಲ ಪುಸ್ತಕದಲ್ಲಿ ಮಾತ್ರ ಜಾರಿಯಾಗಿದೆ. ಆದರೆ, ಗಡಿನಾಡು ಬೆಳಗಾವಿಯಲ್ಲಿ 4 ತಲೆ ಮಾರುಗಳಿಂದ ಪರಿಸರ ಸ್ನೇಹಿ ಗಣಪನನ್ನೇ ತಯಾರಿಸುವ ಮೂಲಕ ಇಲ್ಲೊಂದು ಕುಟುಂಬ ಮಾದರಿಯಾಗಿದೆ.
ಇವರ ಹೆಸರು ಪರಶುರಾಮ್ ಪಾಲ್ಕರ್. ವೃತ್ತಿಯಲ್ಲಿ ಮರಾಠಿ ದೈನಂದಿನ ಪತ್ರಿಕೆ "ಪುಡಾರಿ"ಗೆ ಬೆಳಗಾವಿ ವರದಿಗಾರ. ಆದರೆ, ಪ್ರವೃತ್ತಿಯಲ್ಲಿ ಕುಲಕಸುಬನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬೆಳಗಾವಿಯ ಬಡಕಲ್ ಗಲ್ಲಿಯ "ಆರೋಗ್ಯಂ ಆರ್ಟ್ ಗ್ಯಾಲರಿ" ಯಲ್ಲಿ ಇವರ ಗಣೇಶ ಮೂರ್ತಿ ತಯಾರಿಕೆ ಭರದಿಂದ ಸಾಗಿದೆ. ಇನ್ನು ಪರಶುರಾಮ್ ಅವರ ತಂದೆ ಯಲ್ಲಪ್ಪ ತಮ್ಮ ಇಳಿ ವಯಸ್ಸಲ್ಲೂ ಉತ್ಸಾಹದಿಂದ ಕಾಯಕದಲ್ಲಿ ತೊಡಗಿದ್ದಾರೆ. ಅದೇ ರೀತಿ ಪತ್ನಿ ಅಶ್ವಿನಿ, ಪುತ್ರರಾದ ತನ್ಮಯ ಮತ್ತು ಶ್ರೀನಯ ಕೂಡ ಇವರಿಗೆ ಸಾಥ್ ಕೊಡುತ್ತಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಪರಶುರಾಮ ಪಾಲ್ಕರ್, "ನಮ್ಮ ಅಜ್ಜನ ಕಾಲದ ಕಾಯಕ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಶ್ರೀಕೃಷ್ಣ, ಜ್ಯೋತಿಬಾ, ದಗಡುಶೇಟ್, ಶ್ರೀರಾಮ, ಬಾಲಗಣೇಶ ಸೇರಿ ಭಕ್ತರ ಬೇಡಿಕೆಯಂತೆ ನಾನಾ ರೀತಿಯ ಮಣ್ಣಿನ ಗಣೇಶ ಮೂರ್ತಿ ಮಾಡಿಕೊಡುತ್ತೇವೆ. ಕಳೆದ ವರ್ಷ 75 ಮೂರ್ತಿಗಳ ಆರ್ಡರ್ ಬಂದಿದ್ದವು. ಈ ವರ್ಷ 125 ಮೂರ್ತಿಗಳ ಆರ್ಡರ್ ಬಂದಿದೆ. ಅದೇ ರೀತಿ ಕಳೆದ ಐದು ವರ್ಷಗಳಿಂದ ಮರಾಠಾ ಲೈಟ್ ಇನಫ್ಯಾಂಟರಿ (ಎಂಎಲ್ಐಆರ್ಸಿ) ಅವರಿಗೆ ಐದು ಅಡಿ ಎತ್ತರದ ಮಣ್ಣಿನ ಗಣಪನನ್ನೇ ಮಾಡಿಕೊಡುತ್ತಿದ್ದೇವೆ" ಎಂದು ತಿಳಿಸಿದರು.
"ಖಾನಾಪುರ ತಾಲ್ಲೂಕಿನ ಗರ್ಲಗುಂಜಿ ಗ್ರಾಮದಿಂದ ಮಣ್ಣನ್ನು ತೆಗೆದುಕೊಂಡು ಬರುತ್ತೇವೆ. ಮಣ್ಣಿನ ಗಣಪನ ಮೂರ್ತಿ ಮಾಡುವುದು ತುಂಬಾ ಕಷ್ಟ. ಎರಡು ತರಹದ ಮಣ್ಣನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಹದಗೊಳಿಸಬೇಕು. ಒಂದು ಗಣಪತಿ ಪೂರ್ತಿ ತಯಾರಾಗಲು ಕನಿಷ್ಠ ಮೂರು ದಿನ ಬೇಕಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ಕೆಲಸ ಆರಂಭವಾಗಿ, ಈಗ ಮೂರ್ತಿಗಳಿಗೆ ಬಣ್ಣದ ಕೆಲಸ ಶುರುವಾಗಿದೆ. ಅಲ್ಲದೇ ಮಳೆಗೆ ಮೂರ್ತಿಗಳನ್ನು ಒಣಗಿಸಬೇಕು. ಇನ್ನು ಮೂರ್ತಿಗಳಿಗೆ ಯಾವುದೇ ರಾಸಾಯನಿಕ ಬಣ್ಣವನ್ನೂ ಬಳಸದೇ ನೈಸರ್ಗಿಕ ಬಣ್ಣವನ್ನೇ ಬಳಿಯುತ್ತೇವೆ. ಒಂದಿಷ್ಟು ಭಕ್ತರು ಬಣ್ಣ ರಹಿತ ಗಣಪನ ಮೂರ್ತಿಗಳನ್ನೇ ಒಯ್ಯುತ್ತಾರೆ" ಎನ್ನುತ್ತಾರೆ ಪರಶುರಾಮ್ ಪಾಲ್ಕರ್.
ಗೋವಾ ಮಾದರಿ ಪ್ರೋತ್ಸಾಹಧನಕ್ಕೆ ಬೇಡಿಕೆ: "ಬೆಳಗಾವಿಯಲ್ಲಿ ಗಣೇಶ ಮೂರ್ತಿ ತಯಾರಕರಿಗಿಂತ ಮಾರಾಟ ಮಾಡುವವರೇ ಜಾಸ್ತಿ ಇದ್ದಾರೆ. ಪಕ್ಕದ ಕೊಲ್ಹಾಪುರ, ಪುಣೆ ಸೇರಿ ಮತ್ತಿತರ ಕಡೆಗಳಿಂದ ಪಿಓಪಿ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಾರೆ" ಎಂದು ಬೇಸರ ಹೊರಹಾಕಿದ ಪರಶುರಾಮ್ ಪಾಲ್ಕರ್, "ಗೋವಾದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕರಿಗೆ ಅಲ್ಲಿನ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಒಂದು ಮೂರ್ತಿಗೆ 200 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕೂಡ ನಮಗೆ ಪ್ರೋತ್ಸಾಹಧನ ನೀಡಿದರೆ ತುಂಬಾ ಅನುಕೂಲ ಆಗುತ್ತದೆ" ಎಂದು ಕೇಳಿಕೊಂಡರು.
ಒಂದು ತಿಂಗಳು ರಜೆ: ಪುಡಾರಿ ಪತ್ರಿಕೆ ವರದಿಗಾರ ಆಗಿರುವ ಪರಶುರಾಮ್ ಪಾಲ್ಕರ್ ಅವರಿಗೆ ಪ್ರತಿವರ್ಷ ಗಣೇಶೋತ್ಸವ ವೇಳೆ ಮೂರ್ತಿ ತಯಾರಿಸಲು ಒಂದು ತಿಂಗಳು ರಜೆ ನೀಡುತ್ತಿರುವುದು ವಿಶೇಷ. ಗಣೇಶೋತ್ಸವ ಮುಗಿಯುತ್ತಿದ್ದಂತೆ ಮತ್ತೆ ವರದಿಗಾರಿಕೆಗೆ ಇವರು ಮರಳುತ್ತಾರೆ. "ನಮ್ಮ ಸಂಸ್ಥೆಯ ಆಡಳಿತ ಮಂಡಳಿ ನನಗೆ ತುಂಬಾ ಸಹಕಾರ ಕೊಡುತ್ತದೆ. ವೇತನ ಸಹಿತ ಒಂದು ತಿಂಗಳು ರಜೆ ನೀಡುವ ನನ್ನ ಸಂಸ್ಥೆಗೆ ಎಂದೆಂದೂ ಚಿರಋಣಿ" ಎಂಬ ಕೃತಜ್ಞತಾ ಭಾವ ಪರಶುರಾಮ್ ಪಾಲ್ಕರ್ ಅವರದ್ದು.
ವಯಸ್ಸು 74 ಆದರೂ ಕುಗ್ಗದ ಉತ್ಸಾಹ: 74 ವರ್ಷದ ಪರಶುರಾಮ್ ಅವರ ತಂದೆ ಯಲ್ಲಪ್ಪ ಪಾಲ್ಕರ್ ತಮ್ಮ ಇಳಿ ವಯಸ್ಸಲ್ಲೂ ಅತ್ಯಂತ ಉತ್ಸಾಹದಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. "ಬೆಳಗಾವಿಯಲ್ಲಿ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮೊದಲೆಲ್ಲಾ ಮಣ್ಣಿನ ಮೂರ್ತಿಗಳೇ ಇರುತ್ತಿದ್ದವು. ಆದರೆ, ಈಗ ಎಲ್ಲ ಕಡೆ ಪಿಒಪಿ ಮೂರ್ತಿಗಳದ್ದೇ ಕಾರುಬಾರು. ಆದರೂ ನಾವು ಮಣ್ಣಿನ ಮೂರ್ತಿಯನ್ನೇ ತಯಾರಿಸುತ್ತಿದ್ದೇವೆ. ಇದು ಕುಲಕಸುಬು ಆಗಿರುವುದರಿಂದ ಅಜ್ಜ ಮತ್ತು ತಂದೆಯವರಿಂದ ಕಲಿತು, 10ನೇ ವಯಸ್ಸಿನಿಂದ ಮೂರ್ತಿ ತಯಾರಿಸುತ್ತಿದ್ದೇನೆ. ಈಗ ನನ್ನ ಮಗ ಮುಂದುವರಿಸಿದ್ದು, ಮೊಮ್ಮಕ್ಕಳಿಗೂ ಕಲಿಸಿದ್ದೇನೆ" ಎನ್ನುತ್ತಾರೆ ಯಲ್ಲಪ್ಪ ಪಾಲ್ಕರ್.
ಇದನ್ನೂ ಓದಿ: ಮೈಸೂರು: ಗಣಪತಿ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ, ಪಿಒಪಿ ವಿಗ್ರಹಗಳನ್ನು ತಯಾರಿಸುವವರ ವಿರುದ್ಧ ಕ್ರಮ - Ganesh Chaturthi 2024