ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಪಿ.ಎನ್.ಗೌಡರ್ ಎಂಬುವರು ಇದೇ ತಿಂಗಳು 26ರಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಈ ಬಗ್ಗೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ಧಾರೆ.
ಪಿ.ಎನ್.ಗೌಡರ್ ಸಾವಿಗೂ ಮುನ್ನ ಮೂರು ಪುಟದ ಒಂದು ದೊಡ್ಡ ಡೆತ್ ನೋಟ್ ಬರೆದಿಟ್ಟಿದ್ದಾರೆ. ತಮ್ಮ ಸಾವಿಗೆ ಮೂರು ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಹಿರಿಯ ಸಹೋದರ ನಾಗರಾಜ್ ಹಾಗು ಕಿರಿಯ ಸಹೋದರ ಗೌಡ್ರು ಶ್ರೀನಿವಾಸ್ ಮತ್ತು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ಡಿಎಲ್ ಸಂಸ್ಥೆ-ಲ್ಯಾಂಡ್ ಆರ್ಮಿ) ಬಗ್ಗೆ ಉಲ್ಲೇಖಿಸಿದ್ದು, ಸಹೋದರರು ಹಣದ ವಿಚಾರದಲ್ಲಿ ನನಗೆ ದ್ರೋಹ ಎಸಗಿದ್ದು, ಅವರಿಂದಲೇ ಆಸ್ತಿ ವಿಚಾರದಲ್ಲಿ ಸಾಕಷ್ಟು ಕಿರುಕುಳ ಅನುಭವಿಸಿದ್ದೇನೆ ಎಂದು ಡೆತ್ ನೋಟ್ನಲ್ಲಿ ಪಿಎನ್ ಗೌಡರ್ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಸಂತೇಬೆನ್ನೂರಿನ ಕೃಷಿ ಇಲಾಖೆ ಆವರಣದಲ್ಲಿ ಕಾಮಗಾರಿ ಮಾಡಿದ್ದರೂ ಕೂಡ ಕೆಆರ್ಐಡಿಎಲ್ ಅಧಿಕಾರಿಗಳು ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದರು. ಈ ಸಂಸ್ಥೆಯಿಂದ ತನ್ನ ಕುಟುಂಬಕ್ಕೆ ದೊಡ್ಡ ಮೊತ್ತದ ಹಣ ಕೊಡಿಸಬೇಕೆಂದು ಡೆತ್ ನೋಟ್ನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ 306ರಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ
ಈ ಬಗ್ಗೆ ಮೃತನ ಪತ್ನಿ ವಸಂತಕುಮಾರಿ ಮಾತನಾಡಿ, ''ನಮ್ಮ ಮನೆಯವರು ಗುತ್ತಿಗೆದಾರರಾಗಿದ್ದರು. ಲ್ಯಾಂಡ್ ಆರ್ಮಿ ಸಂಸ್ಥೆ ಕೆಲಸ ಮಾಡಿಸಿದ್ದರು. ಒಂದೂವರೆ ವರ್ಷ ಆದರೂ ಕೆಆರ್ಡಿಎಲ್ನಿಂದ ಐದು ಲಕ್ಷ ಹಣ ಬರಬೇಕಿತ್ತು. ಬಿಲ್ ಮಾತ್ರ ಬಂದಿಲ್ಲ. ಸ್ನೇಹಿತರ ಬಳಿ ಸಾಲ ಮಾಡಿದ್ದರು. ಇಲಾಖೆಯಿಂದ ಬರಬೇಕಿದ್ದ ಹಣಕ್ಕಾಗಿ ಸುತ್ತಾಟ ಮಾಡಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಕುಟುಂಬದಲ್ಲಿ ಆಸ್ತಿ ವಿವಾದವೂ ಇತ್ತು. ಸಹೋದರರಿಂದ ಸರಿಯಾದ ಆಸ್ತಿ ಪಾಲು ಬಂದಿಲ್ಲ ಎಂದೂ ನೊಂದಿದ್ದರು'' ಎಂದು ತಿಳಿಸಿದರು.
ಈ ಪ್ರಕರಣ ಸಂಬಂಧ ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿ, "ಸಂತೇಬೆನ್ನೂರು ಪೋಲಿಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಡೆತ್ ನೋಟ್ ಸಹ ಸಿಕ್ಕಿದೆ. ಕೆಆರ್ಡಿಎಲ್ನಲ್ಲಿ ಗುತ್ತಿಗೆದಾರರಾಗಿದ್ದರು. ಸಹೋದರರಾದ ಶ್ರೀನಿವಾಸ್, ನಾಗರಾಜ ಮತ್ತು ಕೆಆರ್ಡಿಎಲ್ನಿಂದ ಹಣ ಬರುವುದು ಬಾಕಿ ಇತ್ತು. ಈ ಕಾರಣಗಳಿಂದ ಹಣ ಸಮಸ್ಯೆ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಶ್ರೀನಿವಾಸ್, ನಾಗರಾಜ ಹಾಗೂ ಕೆಆರ್ಡಿಎಲ್ ಇಲಾಖೆಯವರು ಎಂದು ಪ್ರಕರಣ ದಾಖಲಿಸಿದ್ದೇವೆ. ತನಿಖೆ ನಂತರ ಹಣದ ಮಾಹಿತಿ ಸಿಗಲಿದೆ'' ಎಂದು ವಿವರಿಸಿದರು.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಅಕ್ರಮ ತನಿಖೆಗೆ ಎಸ್ಐಟಿ ರಚನೆ: ಒಂದೇ ವರ್ಷದಲ್ಲಿ ಮೂರನೇ ತನಿಖಾ ತಂಡ ಅಸ್ತಿತ್ವಕ್ಕೆ!