ಚಾಮರಾಜನಗರ: ತಮಿಳುನಾಡು - ಕರ್ನಾಟಕ ಉಭಯ ರಾಜ್ಯಗಳ ಅಧಿಕಾರಿಗಳ ಸಂಧಾನದಿಂದ ಕರ್ನಾಟಕ ಭಾಗದಲ್ಲಿ ಮತ್ತೆ ತೆಪ್ಪ ನಡೆಸಲು ರಾಜಿ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು ವಿವಾದಕ್ಕೆ ತೆರೆ ಬಿದ್ದಿದೆ.
ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರನ್ನು ಸೋಮವಾರ ಕರೆದುಕೊಂಡು ಹೋಗಿದ್ದಾಗ ತಮಿಳುನಾಡು ಪೊಲೀಸರು ತೆಪ್ಪ ಒಡಿಸುವವರಿಂದ ಮೊಬೈಲ್ ಹಾಗೂ ಹುಟ್ಟು ಕಿತ್ತುಕೊಂಡಿದ್ದರು. ಇದರಿಂದಾಗಿ ಆಕ್ರೋಶಗೊಂಡಿದ್ದ ಕರ್ನಾಟಕ ತೆಪ್ಪ ಒಡಿಸುವವರು ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಮಧ್ಯಾಹದಿಂದಲೇ ತೆಪ್ಪ ಸಂಚಾರ ಸ್ಥಗಿತಗೊಳಿಸಿದ್ದರು. ಎಚ್ಚೆತ್ತ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ತಮಿಳುನಾಡಿನ ಡಿವೈಎಸ್ .ಪಿ. ಜಯಸುಂದರ್, ಇನ್ಸ್ಪೆಕ್ಟರ್ ಮುರಳಿ, ಗೋಪಿನಾಥಂ, ಡಿ ಆರ್ಎಫ್ ದಿನೇಶ್, ಮಲೆ ಮಹದೇಶ್ವರ ಬೆಟ್ಟದ ಮುಖ್ಯಪೇದೆ ಮುರುಗೇಶ್ ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಸಭೆ ನಡೆಸಿ ರಾಜಿ ಮಾಡಲಾಗಿದೆ.
ಸಭೆಯಲ್ಲಿ ತಮಿಳುನಾಡಿನ ಡಿವೈಎಸ್ಪಿ ಜೈ ಸುಂದರ್ ಮಾತನಾಡಿ, "ಹೊಗೇನಕಲ್ ಜಲಪಾತ ವೀಕ್ಷಿಸಲು ಬರುವ ವೇಳೆಯಲ್ಲಿ ಪ್ರವಾಸಿಗರು ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗುವ ವೇಳೆ ಜಾರಿ ಜಲಪಾತಕ್ಕೆ ಬಿದ್ದು ಅನಾಹುತ ಸಂಭವಿಸಬಹುದು ಎನ್ನುವ ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡು ಭಾಗದಲ್ಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪ್ರವಾಸಿಗರನ್ನು ಕರೆದುಕೊಂಡು ಮತ್ತೆ ಸುರಕ್ಷಿತವಾಗಿ ಕರೆತಂದು ಬಿಡುವುದು ತೆಪ್ಪ ನಡೆಸುವವರ ಜವಾಬ್ದಾರಿಯಾಗಿರುತ್ತದೆ. ಪ್ರವಾಸಿಗರ ಜೀವ ರಕ್ಷಣೆಯು ಸಹ ನಿಮ್ಮ ಮೇಲಿದೆ. ಎಚ್ಚರಿಕೆಯಿಂದ ಇರುವಂತೆ ನಾವು ಹೇಳಿದ್ದೇವೆ. ತೆಪ್ಪ ನಡೆಸುವವರು ರಕ್ಷಣೆ ಜೊತೆಗೆ ತಾವು ಬೋಟಿಂಗ್ ನಡೆಸುವುದಾಗಿ ಹೇಳಿದ ಬಳಿಕ ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ"ಎಂದು ಸಮಜಾಯಿಷಿ ಕೊಟ್ಟರು.
ಸದ್ಯ ಎರಡು ರಾಜ್ಯಗಳ ಅಧಿಕಾರಿಗಳ ಸಭೆ ಯಶಸ್ವಿಯಾದ ಹಿನ್ನೆಲೆ ಮತ್ತೆ ತೆಪ್ಪ ಸಂಚಾರ ಪ್ರಾರಂಭವಾಗಿದೆ.
ಇದನ್ನೂ ಓದಿ: ಬೆಳಗಾವಿ ಎಪಿಎಂಸಿ ಬಂದ್ ಮಾಡಿ ಈರುಳ್ಳಿ ಬೆಳೆಗಾರರಿಂದ ದಿಢೀರ್ ಪ್ರತಿಭಟನೆ