ಗಂಗಾವತಿ (ಕೊಪ್ಪಳ): ಬಿರುಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಸಿಗದ ಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ಜಾನುವಾರು, ಪಕ್ಷಿ-ಪ್ರಾಣಿಗಳ ಬಗ್ಗೆ ಜನ ಗಮನ ಹರಿಸುವುದು ಕಡಿಮೆ. ಆದರೆ ಉದ್ಯಮಿಯೊಬ್ಬರು ನಗರದಲ್ಲಿರುವ ಬಿಡಾಡಿ ದನಗಳಿಗೆ ಆಹಾರ ಮತ್ತು ನೀರುಣಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಈಗಾಗಲೇ ಶೈಕ್ಷಣಿಕ, ಪರಿಸರ ಮತ್ತು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಎನ್.ಆರ್. ಇಂಡಸ್ಟ್ರೀಸ್ನ ಮಾಲೀಕ ಎನ್.ಆರ್. ಶ್ರೀನಿವಾಸ ಅವರು ನಗರದಲ್ಲಿರುವ ನೂರಾರು ಬಿಡಾಡಿ ಜಾನುವಾರುಗಳಿಗೆ ನಿತ್ಯ ಸಾವಿರಾರು ರೂಪಾಯಿ ವ್ಯಯಿಸಿ ನೀರು-ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ.
ಇದಕ್ಕಾಗಿ ಒಂದು ಟಂಟಂ ವಾಹನದಲ್ಲಿ ಒಂದು ಸಾವಿರ ಲೀಟರ್ ನೀರಿನ ಸಿಂಟೆಕ್ಸ್ ಅಳವಡಿಸಿ, ಅಕ್ಕಿ ತವಡು, ಗೋಧಿ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಜಾನುವಾರುಗಳು ಇದ್ದಲ್ಲಿಗೇ ಕೊಂಡೊಯ್ದು ನೀಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಇದಕ್ಕಾಗಿ ಓರ್ವ ಚಾಲಕನನ್ನು ನೇಮಿಸಿದ್ದು, ನಿತ್ಯವೂ ನಗರದಾದ್ಯಂತ ಸಂಚರಿಸಿ 200ಕ್ಕೂ ಹೆಚ್ಚು ಜಾನುವಾರುಗಳಿಗೆ ಉಣ ಬಡಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ವಾಹನ ಚಾಲಕ ಇಮಾಮ್ಸಾಬ್, ಜಾನುವಾರುಗಳಿಗೆ ನೀರುಣಿಸುವ ಕೆಲಸಕ್ಕಾಗಿಯೇ ನನಗೆ ನೇಮಿಸಿಕೊಂಡಿದ್ದು, ಮಾಸಿಕ ವೇತನ ನೀಡುತ್ತಿದ್ದಾರೆ. ವಾಹನ, ಇಂಧನ, ನೀರು, ಆಹಾರದ ವೆಚ್ಚ ಸೇರಿ ಸುಮಾರು ದಿನಕ್ಕೆ ಒಂದೂವರೆ ಸಾವಿರ ರೂಪಾಯಿ ವೆಚ್ಚವಾಗುತ್ತಿದೆ.
ಗಂಗಾವತಿ ನಗರದಲ್ಲಿ ಜಾನುವಾರುಗಳು ಎಲ್ಲಿಯೇ ಇರಲಿ, ಅಲ್ಲಿಗೆ ಹುಡುಕಿಕೊಂಡು ಹೋಗಿ ನೀರುಣಿಸುವ ಮತ್ತು ನೀರಿನೊಂದಿಗೆ ತವಡು ಮಿಶ್ರಣ ಮಾಡಿ ಆಹಾರ ನೀಡಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ ಆರು ಗಂಟೆಯವರೆಗೂ ಈ ಕೆಲಸ ನಿರಂತರವಾಗಿ ನಡೆಯುತ್ತದೆ ಎಂದು ಚಾಲಕ ತಿಳಿಸಿದರು.
ನಾನಾ ಕ್ಷೇತ್ರದಲ್ಲಿ ಸೇವೆ: ಉದ್ಯಮಿ ಎನ್.ಆರ್. ಶ್ರೀನಿವಾಸ್ ಅವರು, ತಮ್ಮ ತಂದೆ ಎನ್.ರಾಮರಾವ್ ಸ್ಮರಣಾರ್ಥವಾಗಿ ಎನ್.ಆರ್. ಫೌಂಡೇಷನ್ ಸ್ಥಾಪಿಸಿ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶಕ್ಕೆ ದತ್ತು ಸ್ವೀಕಾರ, ಸುಣ್ಣ-ಬಣ್ಣ ಬಳಿಯಿಸಿ ಶಾಲೆ ಅಂದ ಹೆಚ್ಚಿಸಿ ಮಕ್ಕಳನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.
ಅಲ್ಲದೇ ಗ್ರಾಮೀಣ ಭಾಗದ ಮಳೆಯಾಶ್ರಿತ ಪ್ರದೇಶದಲ್ಲಿ ಮರಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆ, ಗ್ರಾಮೀಣ ಭಾಗದಲ್ಲಿ ಬಡವರಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.
ಬರಗಾಲದ ಈ ಸಂದರ್ಭದಲ್ಲಿ ಮೂಕ ಪ್ರಾಣಿ-ಪಕ್ಷಗಳಿಗೆ ನೀರು, ಆಹಾರ ನೀಡುತ್ತಿರುವ ಉದ್ಯಮಿಯ ಈ ಮಾನವೀಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.