ಹುಬ್ಬಳ್ಳಿ: ಮೂರು ವರ್ಷದ ಪೋರನೊಬ್ಬ ಅಪಾರ ಜ್ಞಾಪಕ ಶಕ್ತಿಯಿಂದ ದೊಡ್ಡ ಸಾಧನೆ ಮಾಡಿದ್ದಾನೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಇಂಡಿಯಾ ಬುಕ್ ಅಪ್ ರೆಕಾರ್ಡನಲ್ಲಿ ಹೆಸರು ದಾಖಲಿಸುವುದರ ಜೊತೆಗೆ ವರ್ಲ್ಡ್ ರೆಕಾರ್ಡ್ ಯುನಿವರ್ಸಿಟಿಯಿಂದ ಗ್ರ್ಯಾಂಡ್ ಮಾಸ್ಟರ್ ಅವಾರ್ಡ್ ಪಡೆದು ಧಾರವಾಡ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ.
ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದ ಗ್ರಾಮೀಣ ಶಿಕ್ಷಣ ಸಂಸ್ಥೆಯ ಕನ್ನಡ ಭಾಷೆಯ ಸಹ ಶಿಕ್ಷಕಿಯಾದ ಮಂಜುಳಾ ಒಣರೊಟ್ಟಿ ಹಾಗೂ ಆರ್ಯವರ್ಧನ್ ಇಂಗ್ಲಿಷ್ ಟ್ಯೂಷನ್ ಕ್ಲಾಸಸ್ ಮಾಲೀಕ ಪ್ರಕಾಶ ಕೋಟಿ ಇವರ ಪುತ್ರ ಆರ್ಯವರ್ಧನ್ ಕೋಟೆ ಎಂಬಾತನೇ ಈ ಸಾಧನೆ ಮಾಡಿದ ಬಾಲಕ. ಈ ಬಾಲಕನಿಗೆ 3 ವರ್ಷ 5 ತಿಂಗಳುಗಳಾಗಿದ್ದು, ಪ್ರಸ್ತುತ ನವಲಗುಂದದ ಶ್ರೀ ಕೃಷ್ಣ ಪೂರ್ವ ಪ್ರಾಥಮಿಕ ಶಾಲೆ ನರ್ಸರಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಸಾಧನೆಗಳು: ಈ ಬಾಲಕ 1500ಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುತ್ತಾನೆ. ಭಾರತದ 29 ರಾಜ್ಯಗಳು ಮತ್ತು ರಾಜಧಾನಿಗಳ ಹೆಸರನ್ನು ಕೇವಲ 40 ಸೆಕೆಂಡ್ನಲ್ಲಿ ಹೇಳಬಲ್ಲ. 25ಕ್ಕೂ ಹೆಚ್ಚು ದೇಶಗಳ ಹೆಸರು, 1947 - 2024 ಪ್ರಧಾನ ಮಂತ್ರಿಗಳ ಹೆಸರು ಮತ್ತು ಜ್ಞಾನಪೀಠ ಪ್ರಸಸ್ತಿ ವಿಜೇತರ ಹೆಸರು ಅನುಕ್ರಮವಾಗಿ, 25ಕ್ಕೂ ಹೆಚ್ಚು ವಚನಕಾರರ ಅಂಕಿತನಾಮ, 25ಕ್ಕೂ ಹೆಚ್ಚು ಸ್ವಾತಂತ್ರ ಹೋರಾಟಗಾರರು ಮತ್ತು 50 ಕ್ಕೂ ಹೆಚ್ಚು ಘೋಷವಾಕ್ಯಗಳು, ಕೇಂದ್ರ ಮಂತ್ರಿಗಳ ಹೆಸರು ಮತ್ತು ಖಾತೆ, ರಾಜ್ಯ ಮಿನಿಸ್ಟರ್ ಹೆಸರು ಮತ್ತು ಖಾತೆ, ಪಟಪಟನೇ ಹೇಳುತ್ತಾನೆ.
25 ಇಂಗ್ಲಿಷ್ ರೈಮ್ಸ್, 6 ಹಿಂದಿ ರೈಮ್ಸ್, 10 ಸ್ಟೋರಿಗಳನ್ನ 22 ದೇಹದ ಭಾಗಗಳು, 22 ತರಕಾರಿ, 30 ಹಣ್ಣುಗಳು, 12 ಸಾಕು ಪ್ರಾಣಿಗಳು, 17ಕಾಡು ಪ್ರಾಣಿಗಳು, 20 ಪಕ್ಷಿಗಳು, 20 ವಾಹನಗಳು, 8 ಗ್ರಹಗಳ ಹೆಸರು, 8 ಬಣ್ಣ, 7 ಖಂಡಗಳ ಹೆಸರು, ವಾರದ 7 ದಿನಗಳು, ವರ್ಷದ 12 ತಿಂಗಳುಗಳು, ಆಂಗ್ಲ ಭಾಷೆಯ 26 ಅಕ್ಷರಗಳು, 1 ರಿಂದ 50 ಅಂಕಿಗಳನ್ನ ಮೇಲಿನ ಇವೆಲ್ಲವನ್ನು ಇಂಗ್ಲಿಷ್ ಭಾಷೆಯಲ್ಲಿ ಹೇಳುತ್ತಾನೆ.
ಪೋಷಕರ ಹರ್ಷ: ಮಗನ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಮಗನ ಜ್ಞಾಪಕ ಶಕ್ತಿ ಕಂಡು ನಾವೇ ಬೆರಗಾಗಿದ್ದೇವೆ. ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದಾನೆ. ಒಮ್ಮೆ ಏನಾದರೂ ಹೇಳಿದರೆ ಸಾಕು ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ. ಹೀಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಪ್ರಯತ್ನ ಮಾಡಿದ್ದೆವು ಎಂದು ಮಗನ ಸಾಧನೆಗೆ ಸಂತೋಷ ವ್ಯಕ್ತಪಡಿಸಿದರು. ಹಲವು ಸಂಘ ಸಂಸ್ಥೆಗಳು, ಮಠಾಧೀಶರು ಶಾಲಾ, ಕಾಲೇಜುಗಳಲ್ಲಿ ಮಗನ ಸಾಧನೆಗೆ ಸನ್ಮಾನ ಮಾಡಿದ್ದಾರೆ. ತಮ್ಮ ಪುತ್ರ ಮುಂದೆಯೂ ದೊಡ್ಡ ದಾಖಲೆ ಮಾಡಬೇಕು ಎಂಬ ಗುರಿ ಹೊಂದಿದ್ದಾನೆ ಎಂದು ಮನದಾಳ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪೆನ್ಸಿಲ್ ತುದಿಯಲ್ಲಿ 1.3 ಸೆಂ ಮೀಟರ್ದ ಶ್ರೀರಾಮ ವಿಗ್ರಹ ರಚಿಸಿದ ಶಿಲ್ಪ ಕಲಾವಿದ..