ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಗಾಂಜಾ ಪ್ರಕರಣದಲ್ಲಿ 17 ಜನರನ್ನು ಬಂಧಿಸಿ, ಅಂದಾಜು ಮೂರು ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಉಪನಗರ ಠಾಣೆ ಹಾಗೂ ಹಳೇ ಹುಬ್ಬಳ್ಳಿಯ ಪೊಲೀಸರು ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಪೆಡ್ಲರ್ ಹಾಗೂ ಸೇವನೆ ಮಾಡುವವರನ್ನು ಬಂಧಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದರು.
ನಗರದಲ್ಲಿ ಇಂದು (ಮಂಗಳವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಗಾಂಜಾ ಹಾಗೂ ಡ್ರಗ್ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ. ಇಂದು ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ಜನರನ್ನು ಬಂಧಿಸಲಾಗಿದೆ. ಉಪನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಿಮ್ಸ್ ಆಸ್ಪತ್ರೆ ಹಿಂಭಾಗದಲ್ಲಿ ಗಾಂಜಾ ಮಾರಾಟ ತೊಡಗಿದ್ದ ಹಾಗೂ ಸೇವಿಸುತ್ತಿದ್ದವರಿಂದ 1,630ಗ್ರಾಂ ಗಾಂಜಾ, ಒಂದು ಬೈಕ್, ಏಳು ಮೊಬೈಲ್ಗಳು ಸೇರಿದಂತೆ ಒಟ್ಟು 2.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
''ಗಾಂಜಾ ಸೇವಿಸುತ್ತಿದ್ದ ಶಾಂತಿನಗರ ಮಹಾವೀರ ಕಾಲೋನಿಯ ವೈಭವ ಪರಬ, ಗೋಪನಕೊಪ್ಪದ ರಾಕೇಶ ನಾಯ್ಕ ಬಂಧಿಸಿ, ವಿಚಾರಣೆ ಗೊಳಪಡಿಸಿದಾಗ ಮಾರಾಟಗಾರ ಮತ್ತು ಖರೀದಿರಾರರ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಮಾರಾಟ ಮಾಡುತ್ತಿದ್ದ ಕಮರಿಪೇಟೆಯ ಗಣಪತಸಾ ಅಥಣಿ, ಧಾರವಾಡ ಮಣಿ ಕಿಲ್ಲಾದ ಮಾರುತಿ ಸಬರದ, ನುಗ್ಗಿಕೇರಿಯ ಚಂದ್ರಪ್ಪ ಕಮ್ಮಾರ ಬಂಧಿಸಿ ಅವರಿಂದ 1,576 ಗ್ರಾಂ ಗಾಂಜಾ, ಒಂದು ಬೈಕ್, ನಾಲ್ಕು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಖರೀದಿದಾರರಾದ ಧಾರವಾಡ ಕುಮಾರೇಶ್ವರ ನಗರದ ಗಣೇಶ ಯಾದವ, ದೇವಗಿರಿಯ ರಮೇಶ ಮಾದರ, ಕೆಲಗೇರಿಯ ನಿತೀನ ಮೇದಾರ ಅವರನ್ನು ಬಂಧಿಸಿ, 54 ಗ್ರಾಂ ಗಾಂಜಾ, ಮೂರು ಮೊಬೈಲ್ ವಶಪಡಿಸಿಕೊಂಡು ಎಲ್ಲರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ'' ಎಂದು ಮಾಹಿತಿ ನೀಡಿದರು.
ಮತ್ತೊಂದೆಡೆ, ಹಳೇ ಹುಬ್ಬಳ್ಳಿ ಆನಂದನಗರ ರಸ್ತೆಯ ನಿರ್ಮಾಣ ಹಂತದ ಜಯದೇವ ಆಸ್ಪತ್ರೆ ಹತ್ತಿರ ಮಂಗಳವಾರ ಬೆಳಗಿನ ಜಾವ ಗಾಂಜಾ ಮಾರುತ್ತಿದ್ದ 9 ಜನರನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ, ಅವರಿಂದ ಅಂದಾಜು 1.25 ಲಕ್ಷ ರೂ. ಮೌಲ್ಯದ 1.5 ಕೆಜಿ ಗಾಂಜಾ, 6 ಮೊಬೈಲ್ಗಳು ಮತ್ತು 2 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಮಿರಜ್‌ನ ಆಸ್ಪಕ ಮುಲ್ಲಾ, ಹಳೇ ಹುಬ್ಬಳ್ಳಿಯ ಶಿವಕುಮಾರ ಉರ್ಫ್ ಮಚ್ಚಿ ತುಮಕೂರ, ಇಕ್ಬಾಲ್ ಅಹ್ಮದ ಉರ್ಫ್ ಸಾಹೇಬ ಮುದಗಲ್, ಆರೀಫ್ ಉರ್ಫ್ ಚರಕ ಗಲಗಲಿ, ಅಭಿಷೇಕ ದೇವಮಾನೆ, ಅಮೃತ ಹವಳದ, ಮೊಹ್ಮದರೆಹಾನ್ ಗೋಕಾಕ, ಸಾಧಿಕ್ ಕಿತಾಬ್‌ವಾಲೆ, ಮೆಹಬೂಬಸಾಬ್ ಡೌಗಿ ಮಕಾಂದಾರ ಎಂಬುವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.