ಶಿವಮೊಗ್ಗ: ಹೊಸಪೇಟೆಯ ತುಂಗಭದ್ರಾ ಜಲಾಶಯದ 19ನೇ ಗೇಟ್ನ ಚೈನ್ಲಿಂಕ್ ತುಂಡಾಗಿ ಈಗಾಗಲೇ ಹತ್ತಾರು ಟಿಎಂಸಿ ನೀರು ನದಿಗೆ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ತುಂಗಾ ಅಣೆಕಟ್ಟೆ ಗೇಟ್ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ 'ಈಟಿವಿ ಭಾರತ' ಫ್ಯಾಕ್ಟ್ ಚೆಕ್ ನಡೆಸಿದೆ.
ಶಿವಮೊಗ್ಗ ತಾಲೂಕು ಗಾಜನೂರು ಬಳಿ ನಿರ್ಮಾಣ ಮಾಡಿರುವ ತುಂಗಾ ಮೇಲ್ದಂಡೆ ಯೋಜನೆಯ ತುಂಗಾ ಅಣೆಕಟ್ಟೆಗೆ ಒಟ್ಟು 22 ಗೇಟ್ಗಳನ್ನು ಅಳವಡಿಸಲಾಗಿದೆ. ಇದರ 8ನೇ ರೇಡಿಯಲ್ ಗೇಟ್ನಲ್ಲಿ ಸಣ್ಣ ಸಮಸ್ಯೆ ಉಂಟಾಗಿದ್ದು, ರೇಡಿಯಲ್ ಗೇಟ್ ಮೇಲೆ ಕೆಳಗಿಳಿಸುವ ವೈ ರೋಪ್‌ನ ಮೇಲ್ಭಾಗದಲ್ಲಿ ಸವೆತ ಕಂಡುಬಂದಿದೆ. ಅದನ್ನು ಆಪರೇಟ್ ಮಾಡಿದಲ್ಲಿ, ಕಟ್ ಆಗುವ ಸಾಧ್ಯತೆ ಇದ್ದು, ಈ ಗೇಟ್ ಅನ್ನು ಆಪರೇಟ್ ಮಾಡದೆ ಇಂಜಿನಿಯರ್ಗಳು ಹಾಗೇ ಉಳಿಸಿಕೊಂಡಿದ್ದಾರೆ.
ಇದರಿಂದ ಜಲಾಶಯದ 22 ಗೇಟ್ಗಳಲ್ಲಿ 21 ಗೇಟ್ಗಳನ್ನು ಮಾತ್ರ ಅಪರೇಟ್ ಮಾಡಲಾಗುತ್ತಿದೆ. ಈ ಅಣೆಕಟ್ಟೆಗೆ ರೇಡಿಯಲ್ ಗೇಟ್ನಂತೆ ಕ್ರಸ್ಟ್ ಗೇಟ್ ಸಹ ಇದೆ. ಹಾಲಿ 8ನೇ ರೇಡಿಯಲ್ ಗೇಟ್ ಅನ್ನು ತೆಗೆದು ಕೆಲಸ ಮಾಡಬಯಸಿದರೆ, ಕ್ರಸ್ಟ್ ಗೇಟ್ ಹಾಕಿ ನೀರು ಹೊರ ಹೋಗದಂತೆ ತಡೆಯಬಹುದಾಗಿದೆ. ಇದರಿಂದ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ರೇಡಿಯಲ್ ಗೇಟ್ ಆಪರೇಟ್ ಮಾಡದೆ ಹಾಗೆ ಉಳಿಸಿಕೊಂಡು ನೀರನ್ನು ಉಳಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಈ ಕುರಿತು ತುಂಗಾ ಮೇಲ್ದಂಡೆ ಯೋಜನೆಯ ಎಇ ತಿಪ್ಪನಾಯ್ಕ್ ಅವರು ದೂರವಾಣಿಯಲ್ಲಿ ಮಾಹಿತಿ ಒದಗಿಸಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಅಣೆಕಟ್ಟೆ ಕ್ರಸ್ಟ್ ಗೇಟ್ ಚೈನ್ಲಿಂಕ್ ಕಟ್; ನದಿ ಪಾತ್ರದ ಜನರಲ್ಲಿ ಆತಂಕ - Tungabhadra Dam