ದೇವನಹಳ್ಳಿ (ಬೆಂಗಳೂರು) : ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 5 ದಿನಗಳ ಅಂತರದಲ್ಲಿ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ 11 ಪ್ರಕರಣಗಳನ್ನ ಪತ್ತೆ ಮಾಡುವ ಮೂಲಕ 8 ಸ್ಮಗ್ಲರ್ಸ್ಗಳನ್ನ ಬಂಧಿಸಿದ್ದಾರೆ.
ಅಕ್ರಮವಾಗಿ ಚಿನ್ನ ಸಾಗಿಸಲು ಸ್ಮಗ್ಲರ್ಸ್ಗಳು ಸುಲಭ ದಾರಿ ಎಂದು ವಾಯುಮಾರ್ಗವನ್ನ ಬಳಸುತ್ತಾರೆ. ಆದರೆ ಸ್ಮಗ್ಲರ್ಸ್ಗಳನ್ನ ಭೇಟಿಯಾಗಲೆಂದೆ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾದು ಕುಳಿತ್ತಿರುತ್ತಾರೆ. ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಕಳೆದ 5 ದಿನಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಜುಲೈ 9 ರಿಂದ ಜುಲೈ 13 ರವರೆಗೆ ವಿವಿಧ 11 ಅಕ್ರಮ ಚಿನ್ನ ಸಾಗಣೆ ಪ್ರಕರಣಗಳನ್ನ ಪತ್ತೆ ಮಾಡಿದ್ದಾರೆ. ಕಂದಾಯ ಗುಪ್ತಚಾರ ನಿರ್ದೇಶನಾಲಯದ ಖಚಿತ ಮಾಹಿತಿ ಮೇರೆಗೆ ಪ್ರಕರಣಗಳು ಬೆಳಕಿಗೆ ಬಂದಿದ್ದು, 11 ಪ್ರಕರಣಗಳಲ್ಲಿ 9375 ಗ್ರಾಂ ತೂಕದ 6.6 ಕೋಟಿ ಮೌಲ್ಯದ ಚಿನ್ನವನ್ನ ಜಪ್ತಿ ಮಾಡಿದ್ದಾರೆ. 8 ವಿದೇಶಿ ಕರೆನ್ಸಿ ಪ್ರಕರಣಗಳನ್ನ ಪತ್ತೆ ಮಾಡಲಾಗಿದ್ದು, ಸುಮಾರು 1.59 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಗಳನ್ನ ಜಪ್ತಿ ಮಾಡಲಾಗಿದೆ.
ಒಟ್ಟು ಎಲ್ಲಾ ಪ್ರಕರಣಗಳಿಂದ 8 ಸ್ಮಗ್ಲರ್ಸ್ಗಳನ್ನ ಬಂಧಿಸಿದ್ದಾರೆ. ಆರೋಪಿಗಳು ಶಾರ್ಜಾ, ದುಬೈ, ಬಹರೇನ್, ಶ್ರೀಲಂಕಾ, ಕೊಲೊಂಬೊ ದೇಶದಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನ ಸಾಗಿಸುವ ಯತ್ನದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ : ಸೊಂಟ ಪಟ್ಟಿಯಲ್ಲಿ ₹1.58 ಕೋಟಿ ಮೌಲ್ಯದ ಚಿನ್ನ! ಬೆಂಗಳೂರು ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ ಇಬ್ಬರು ಪ್ರಯಾಣಿಕರು