ದಾವಣಗೆರೆ: ಇಲ್ಲಿನ ‘ಸ್ಮಾರ್ಟ್ ಸಿಟಿ ಲಿಮಿಟೆಡ್’ ಪೂರ್ಣಗೊಳಿಸಿದ 54 ಯೋಜನೆಗಳ ಹಸ್ತಾಂತರಕ್ಕೆ ಸಿದ್ಧವಾಗಿದೆ. ಆದರೆ ಈ ಯೋಜನೆಗಳನ್ನು ಸ್ವಾಧೀನಕ್ಕೆ ಪಡೆದು ನಿರ್ವಹಣೆಯ ಹೊಣೆ ಹೊರಲು ಮಹಾನಗರ ಪಾಲಿಕೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಹೀಗಾಗಿ ಕೆಲ ಯೋಜನೆಗಳು ನಿರ್ವಣೆಯ ಕೊರತೆಯಿಂದ ಆರಂಭದಲ್ಲಿಯೇ ಸೊರಗುತ್ತಿವೆ.
ಹೌದು, ಸ್ಮಾರ್ಟ್ ಸಿಟಿಯಡಿ ಕೈಗೆತ್ತಿಕೊಂಡ ಯೋಜನೆಗಳಲ್ಲಿ ಮಹಾನಗರ ಪಾಲಿಕೆಯ ಸುಪರ್ದಿಗೆ ಒಪ್ಪಿಸಬಹುದಾದ 71 ಕಾಮಗಾರಿಗಳಿವೆ. ಇವುಗಳ ಪೈಕಿ 54 ಕಾಮಗಾರಿಗಳನ್ನು ಪೂರ್ಣಗೊಳಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಕ್ಕೆ ‘ಸ್ಮಾರ್ಟ್ ಸಿಟಿ ಲಿಮಿಟೆಡ್’ ಪತ್ರ ವ್ಯವಹಾರ ನಡೆಸುತ್ತಿದೆ. ಮತ್ತೊಂದೆಡೆ, ಮಹಾನಗರ ಪಾಲಿಕೆ ಹಾಗೂ ‘ಸ್ಮಾರ್ಟ್ ಸಿಟಿ ಲಿಮಿಟೆಡ್’ ನಡುವಿನ ಮುಸುಕಿನ ಗುದ್ದಾಟದಲ್ಲಿ ಯೋಜನೆಗಳು ಯಶಸ್ಸು ಕಾಣುವುದು ಅನುಮಾನವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಈಗಾಗಲೇ ಯುವಜನ ಮತ್ತು ಕ್ರೀಡಾ ಇಲಾಖೆ, ಆರೋಗ್ಯ, ಶಿಕ್ಷಣ, ತೋಟಗಾರಿಕೆ ಇಲಾಖೆಗಳು ನಿಗದಿತ ಯೋಜನೆಗಳನ್ನು ಕಾಲಮಿತಿಯಲ್ಲಿ ಸ್ವಾಧೀನಕ್ಕೆ ಪಡೆದಿವೆ. ಥೀಮ್ ಪಾರ್ಕ್ ಸುಪರ್ದಿಗೆ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಪೊಲೀಸ್ ಚೌಕಿಗಳನ್ನು ಸ್ವಾಧೀನಕ್ಕೆ ಪಡೆಯಲು ಪೊಲೀಸ್ ಇಲಾಖೆ ಉತ್ಸುಕತೆ ತೋರಿವೆ. ಆದರೆ, ಮಹಾನಗರ ಪಾಲಿಕೆ ಮಾತ್ರ ಈವರೆಗೆ ಒಂದೂ ಯೋಜನೆಯ ನಿರ್ವಹಣೆ ಜವಾಬ್ದಾರಿ ಪಡೆದಿಲ್ಲ.
ನಗರದಲ್ಲಿ ನಿರ್ಮಾಣಗೊಂಡ ಕುಂದವಾಡ ಕೆರೆ, ಮಂಡಕ್ಕಿ ಭಟ್ಟಿ ರಸ್ತೆ, ಖಾಸಗಿ ಬಸ್ ನಿಲ್ದಾಣ, ಜಗಳೂರು ರಸ್ತೆಯ ಬಸ್ ನಿಲ್ದಾಣ, ಹೊಂಡದ ವೃತ್ತದ ಕಲ್ಯಾಣಿ, ಉದ್ಯಾನಗಳಲ್ಲಿರುವ ಜಿಮ್‌ಗಳು, ವಿದ್ಯುತ್ ಚಿತಾಗಾರ, ಶೌಚಾಲಯ ಸೇರಿ ಹಲವು ಕಾಮಗಾರಿ ಪೂರ್ಣಗೊಂಡು ಆಯಾ ಸ್ಥಳಗಳು ನಿರ್ಹಹಣೆಗಾಗಿ ಹಸ್ತಾಂತರಕ್ಕೆ ಕಾಯುತ್ತಿವೆ. ನಗರ ವ್ಯಾಪ್ತಿಯ 31 ಉದ್ಯಾನಗಳಲ್ಲಿ 7.35 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜಿಮ್ ಹಾಗೂ ಆಟಿಕೆಗಳು ದೂಳು ಹಿಡಿಯುತ್ತಿವೆ. ನಗರದ 29 ಸ್ಥಳಗಳಲ್ಲಿ ನಿರ್ಮಿಸಿದ ‘ಸ್ಮಾರ್ಟ್’ ಶೌಚಾಲಯಗಳು ಜನರ ಸೇವೆಗೆ ಲಭ್ಯವಾಗಿಲ್ಲ.
ನಿರ್ದಿಷ್ಟ ಯೋಜನೆಯನ್ನು ಸ್ವೀಕರಿಸಲು ಇಲಾಖೆಯ ಪ್ರತಿನಿಧಿಗಳು ಹಾಗೂ ‘ಸ್ಮಾರ್ಟ್ ಸಿಟಿ’ ಎಂಜಿನಿಯರ್ಗಳ ತಂಡ ಜಂಟಿ ಸಮೀಕ್ಷೆ ನಡೆಸಿದ್ದಾರೆ. ಅಲ್ಲದೆ, ಮಹಾನಗರ ಪಾಲಿಕೆಯಲ್ಲಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಲು ಸಿದ್ಧತೆ ನಡೆಸಲಾಗಿದೆ. ಮೇಯರ್ ನೇತೃತ್ವದಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಕೆಲ ಯೋಜನೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅವುಗಳನ್ನು ಹೊರತುಪಡಿಸಿ ಉಳಿದ ಯೋಜನೆಗಳನ್ನು ಸ್ವಾಧೀನಕ್ಕೆ ಪಡೆಯಲು ಮಹಾನಗರ ಪಾಲಿಕೆ ಗ್ರೀನ್ಸಿಗ್ನಲ್ ಕೊಟ್ಟಿದೆ.
ಸ್ಮಾರ್ಟ್ಸಿಟಿ ಎಂಡಿ ವೀರೇಶ್ ಈಟಿವಿ ಭಾರತ್ ಜೊತೆಗೆ ಮಾತನಾಡಿ, "ಸುಮಾರು 71 ಯೋಜನೆಗಳ ಪೈಕಿ 70 ಕಾಮಗಾರಿಗಳು ಹಸ್ತಾಂತರಕ್ಕೆ ಸಿದ್ಧವಾಗಿವೆ. ಒಂದು ಕಾಮಗಾರಿ ಮಾತ್ರ ಟೆಂಡರ್ ಹಂತದಲ್ಲಿದೆ. ಒಟ್ಟು 117 ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಪೈಕಿ 71 ಕಾಮಗಾರಿಗಳು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಬೇಕಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಹಸ್ತಾಂತರ ಪ್ರಕ್ರಿಯೆ ಆಗುತ್ತದೆ. ಇನ್ನೂ ಕೆಲ ಕಾಮಗಾರಿಗಳಿಗೆ ಹೊಸ ರೂಪ ಕೊಡಲಾಗುವುದು" ಎಂದು ಮಾಹಿತಿ ನೀಡಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, "ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ 54 ಕಾಮಗಾರಿಗಳ ಪಟ್ಟಿ ಕೊಡಲಾಗಿದೆ. 54 ಕಾಮಗಾರಿಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತವೆ. ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಯೋಜನೆಗಳನ್ನು ಸ್ಮಾರ್ಟ್ ಸಿಟಿ ಇಂಜಿನಿಯರ್ ಹಾಗೂ ಪಾಲಿಕೆ ಇಂಜಿನಿಯರ್ಗಳು ಈಗಾಗಲೇ ತಪಾಸಣೆ ನಡೆಸಿದ್ದಾರೆ. 54 ಯೋಜನೆಗಳ ಪೈಕಿ 8 ಕಾಮಗಾರಿಗಳ ತಪಾಸಣೆ ನಡೆಸಿಲ್ಲ" ಎಂದರು.
"ನಾಲ್ಕು ಯೋಜನೆಗಳು ನ್ಯಾಯಾಲಯದಲ್ಲಿವೆ. ಇ - ಟಾಯ್ಲೆಟ್ ಯೋಜನೆ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚೆ ಆಗಬೇಕಾಗಿದೆ ಎಂದು ಕಾಯ್ದಿರಿಸಲಾಗಿದೆ. 45 ಕಾಮಗಾರಿಗಳ ತಪಾಸಣೆ ನಡೆಸಿ ಸ್ಮಾರ್ಟ್ ಸಿಟಿ ಇಂಜಿನಿಯರ್ ಹಾಗೂ ಪಾಲಿಕೆ ಇಂಜಿನಿಯರ್ಗಳು ಹಸ್ತಾಂತರಕ್ಕೆ ಸಿದ್ಧತೆ ನಡೆಸಿದ್ದಾರೆ. ತೆರಿಗೆ ಕಮಿಟಿ ಹಾಗೂ ಪ್ಲಾನಿಂಗ್ ಕಮಿಟಿಯಲ್ಲಿ ಪ್ರಸ್ತಾವನೆ ಇಟ್ಟಿದ್ದೇವೆ. ಅದು ಸಾಮಾನ್ಯ ಸಭೆಗೆ ಹೋಗಿದೆ. ಸಾಮಾನ್ಯ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕರೆ ಹಸ್ತಾಂತರ ಮಾಡಿಕೊಳ್ಳುತ್ತೇವೆ. ರಸ್ತೆ ಕಾಮಗಾರಿ, ಚರಂಡಿ, ಕುಂದವಾಡ ಕೆರೆ, ಖಾಸಗಿ ಬಸ್ ನಿಲ್ದಾಣ, ಪುಷ್ಕರಣಿ ಕಾಮಗಾರಿಗಳು ಹಸ್ತಾಂತರ ಆಗಬೇಕಿದೆ. ಈ ಕುರಿತು ಮೇಯರ್ ಅವರಿಗೆ ಫೈಲ್ ಕಳಿಸಲಾಗಿದೆ. ಸಾಮಾನ್ಯ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕರೆ ಹಸ್ತಾಂತರ ಮಾಡಿಕೊಳ್ಳುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ದಾವಣಗೆರೆ: ವಾಂತಿ–ಭೇದಿಯಿಂದ ಏಳು ಜನ ಅಸ್ವಸ್ಥ, ಆಸ್ಪತ್ರೆಯಲ್ಲಿ ಓರ್ವ ಮಹಿಳೆ ಸಾವು - vomiting and dysentery