ಮೈಸೂರು: ಈ ಬಾರಿ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಸಾಗುವ ಸ್ತಬ್ಧಚಿತ್ರ ಮೆರವಣಿಗೆ ವಿಶೇಷವಾಗಿರಲಿದೆ. ಏಕೆಂದರೆ, ಇದೇ ಮೊದಲ ಬಾರಿಗೆ 31 ಜಿಲ್ಲೆಗಳಿಂದ 51 ಕಲಾಕೃತಿಗಳು ಭಾಗವಹಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯಲಿವೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ತಬ್ಧಚಿತ್ರಗಳ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಸ್ತಬ್ಧಚಿತ್ರ ಉಪಸಮಿತಿ ಉಪ ವಿಶೇಷಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, "ಸ್ತಬ್ಧಚಿತ್ರ ಉಪ ಸಮಿತಿ ವತಿಯಿಂದ ಒಟ್ಟು 51 ಸ್ತಬ್ಧಚಿತ್ರ ತಯಾರಾಗಿದ್ದು, ಒಂದೊಂದೂ ವಿಭಿನ್ನವಾಗಿವೆ" ಎಂದು ತಿಳಿಸಿದರು.
"ಜಂಬೂ ಸವಾರಿಯಲ್ಲಿ ಇದೇ ಮೊದಲ ಬಾರಿಗೆ 51 ಸ್ತಬ್ಧಚಿತ್ರಗಳು ಭಾಗವಹಿಸುತ್ತಿವೆ. ಯಾವುದೂ ಪುನರಾವರ್ತನೆಯಾಗಿಲ್ಲ. ಪ್ರತಿಯೊಂದೂ ಆಕರ್ಷಕವಾಗಿವೆ. ಈ ಬಾರಿ ಮೊದಲ ಬಾರಿಗೆ ಭಾರತೀಯ ರೈಲ್ವೆ, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಸಾಧನೆಗಳ ಜೊತೆಗೆ ಸ್ವಾತಂತ್ರ್ಯಪೂರ್ವ-ನಂತರದಲ್ಲಿ ಸಾಧಿಸಿರುವ ಪ್ರಗತಿಯ ಕುರಿತ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ. ಮೈಸೂರು ರೇಷ್ಮೆ ಸೀರೆಗಳನ್ನು ಉತ್ಪಾದನೆ ಮಾಡುವಂತಹ ಕರ್ನಾಟಕ ರೇಷ್ಮೆ ಉದ್ಯಮ ನಿಗಮದಿಂದ ಹೊರತರುತ್ತಿರುವ ಅಪ್ಪಟ ಜರಿ ಸೀರೆಗಳ ನೋಟ ಸೆರೆದಿಡುವಂತಹ ಸ್ತಬ್ಧಚಿತ್ರ, ಮೈಸೂರು ಸ್ಯಾಂಡಲ್ ಸೋಪ್, ಗಂಧದಕಡ್ಡಿ, ಕಲಾಕೃತಿಗಳನ್ನು ಬಿಂಬಿಸುವಂತಹ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ" ಎಂದರು.
31 ಜಿಲ್ಲೆಗಳಿಂದ ಸ್ತಬ್ಧಚಿತ್ರ: "ರಾಜ್ಯದ 31 ಜಿಲ್ಲೆಗಳಿಂದಲೂ ಸ್ತಬ್ಧಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿವೆ. ಕೋಲಾರದ ಕೋಟೆಲಿಂಗೇಶ್ವರ ದೇವಸ್ಥಾನ, ದಕ್ಷಿಣ ಕನ್ನಡದ ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ, ಹಾಸನ ಜಿಲ್ಲೆಯ ವಿಶ್ವಪರಂಪರೆಯ ಬೇಲೂರು ಚೆನ್ನಕೇಶವ ದೇವಾಲಯ, ಹಳೆಬೀಡು ಹೊಯ್ಸಳೇಶ್ವರ ದೇವಾಲಯ, ದಾವಣಗೆರೆ ಜಿಲ್ಲೆಯ ನಾವು ಮನುಜರು, ಗದಗ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ, ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನ, ಕಿನ್ನಾಳೆ ಕಲೆ, ಇಟಗಿ ದೇವಸ್ಥಾನ, ಬೀದರ್ ಜಿಲ್ಲೆಯ ಚೆನ್ನ ಬಸವಪಟ್ಟ ದೇವರು, ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಗಡನ್ನೊಮ್ಮೆ ಬಂದು ನೋಡು, ಕೊಡಗು ಜಿಲ್ಲೆಯ ಭೂಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ, ಕಾಳುಮೆಣಸು, ಆನೆ ಕ್ಯಾಂಪ್ ಅನ್ನು ಜಗತ್ತಿನ ಎದುರು ತೆರೆದಿಡುವಂತೆ ಮಾಡಲಿದೆ. ಮುಖ್ಯಮಂತ್ರಿಯ ತವರು ಜಿಲ್ಲೆಯಿಂದ ಮನುಷ್ಯ ಜಾತಿ ತಾನೊಂದೇ ವಲಂ, ಸಂಸತ್ ಭವನ, ಅನುಭವ ಮಂಟಪ, ಬುದ್ಧ, ಬಸವ, ಅಂಬೇಡ್ಕರ್ ಅವರ ಮಾದರಿಗಳು, ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದೇವಸ್ಥಾನ ಹಾಗೂ ಶಿವನ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ" ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ರಂಜಿತ್, ಉಪಾಧ್ಯಕ್ಷರಾದ ಭಾಸ್ಕರ್ ಎಲ್.ಗೌಡ, ಈಶ್ವರ್ ಚಕ್ಕಡಿ, ಪರಮೇಶ್ ನಾಯಕ್, ಮಂಜುನಾಥ್ ಸೇರಿದಂತೆ ಹಲವರು ಇದ್ದರು.