ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸೂರಜ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ 42ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ.
ಅಸ್ವಾಭಾವಿಕ ಲೈಂಗಿಕ ದೌರ್ಜನ್ಯದಡಿ ಹೊಳೆನರಸಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಡಿ ಸೂರಜ್ ಅವರನ್ನು ಜೂನ್ 23ರಂದು ಬಂಧಿಸಲಾಗಿತ್ತು. ಬಳಿಕ ಪ್ರಕರಣದ ವಿಚಾರಣೆ ಸಿಐಡಿಗೆ ವರ್ಗಾವಣೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಸಂತ್ರಸ್ತ ಸೂರಜ್ ವಿರುದ್ಧ ದೂರು ನೀಡಿದ್ದರು. ಎರಡು ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಈ ಮಧ್ಯೆ ಜಾಮೀನು ಕೋರಿ ಸೂರಜ್ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಇಂದು ನ್ಯಾಯಾಲಯ ಕೈಗೆತ್ತಿಕೊಂಡಿತು. ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ ಸಿಆರ್ ಪಿಸಿ ಸೆಕ್ಷನ್ 437ರಡಿ ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸರ್ಕಾರಿ ಪರ ಅಭಿಯೋಜಕರು ಆಕ್ಷೇಪಿಸಿದರು. ಇಬ್ಬರ ವಾದ ಮಂಡನೆ ಬಳಿಕ ಜಾಮೀನು ಅರ್ಜಿಯನ್ನ ನ್ಯಾ.ಕೆ.ಎನ್.ಶಿವಕುಮಾರ್ ವಜಾಗೊಳಿಸಿದ ಆದೇಶಿಸಿದರು. ಹೀಗಾಗಿ ಜುಲೈ 18ರವರೆಗೆ ಸೂರಜ್ ಜೈಲಿನಲ್ಲಿರುವುದು ಅನಿವಾರ್ಯವಾಗಲಿದೆ.