ಮಂಗಳೂರು: ಭಿಕ್ಷುಕಿಯೊಬ್ಬಳು ಭಿಕ್ಷಾಟನೆಗೆ ಹೋಗಿದ್ದಾಗ ಆಕೆಯ ಮಗುವನ್ನು ಅಪಹರಿಸಿದ ಮತ್ತೋರ್ವ ಭಿಕ್ಷುಕಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ 10 ಸಾವಿರ ದಂಡ ವಿಧಿಸಿದೆ. ರುಬಿಯಾ ಯಾನೆ ಫಾತಿಮಾ(44) ಶಿಕ್ಷೆಗೊಳಗಾದ ಭಿಕ್ಷುಕಿ.
2016 ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ಆರೋಪಿ ರುಬಿಯಾ ಮಂಗಳೂರಿಗೆ ಭಿಕ್ಷಾಟನೆಗೆಂದು ಕಂಕನಾಡಿ ಜಂಕ್ಷನ್ ರೈಲ್ವೆ ಸ್ಟೇಷನ್ ಬಳಿ ಬಂದಿದ್ದಳು. ಈಕೆ ಮತ್ತೋರ್ವ ಭಿಕ್ಷುಕಿ ಸಂಶಾದ್ಳ ಪರಿಚಯವನ್ನು ಮಾಡಿಕೊಂಡು ಆಕೆಯ ಜೊತೆ ಸಲುಗೆಯಿಂದ ಜೊತೆಯಲ್ಲಿದ್ದಳು. ರುಬಿಯಾ 2017 ಜನವರಿ 12 ರಂದು ಕಂಕನಾಡಿ ರೈಲ್ವೆ ಜಂಕ್ಷನ್ ಬಳಿಯ ವಾಹನಗಳ ಪಾರ್ಕಿಂಗ್ ಸ್ಥಳದ ಬಳಿ ಮತ್ತೊಬ್ಬ ಭಿಕ್ಷುಕಿಯ 7 ತಿಂಗಳ ಹಸುಗೂಸನ್ನು ಮಲಗಿಸಿ ಭಿಕ್ಷಾಟನೆಗಾಗಿ ಹೋದ ಸಮಯವನ್ನು ನೋಡಿ ಅಪಹರಣ ಮಾಡಿದ್ದಳು.
ರುಬಿಯಾ ಮಗುವನ್ನು ಬೇರೆ ಕಡೆ ಬಿಟ್ಟು ವಾಪಸ್ ಬಾಧಿತಳೊಂದಿಗೆ ಮಗುವನ್ನು ಹುಡುಕುವ ನಾಟಕವನ್ನಾಡಿ ಆ ಬಳಿಕ ಮಗುವಿನೊಂದಿಗೆ ಪರಾರಿಯಾಗಿದ್ದಳು. ಆರೋಪಿತೆ ಮಗುವನ್ನು ಹಿಡಿದುಕೊಂಡು ಊರೂರು ತಿರುಗಾಡಿಕೊಂಡು ಮಗುವನ್ನು ತೋರಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದಳು. 2020 ಜನವರಿ 22 ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದಿನ ಮಂಡಿ ಮೊಹಲ್ಲಾ ಗ್ರಾಮದ, ಅಶೋಕ ರಸ್ತೆಯಲ್ಲಿರುವ ಮಸೀದ್-ಇ- ಅಜಮ್ ಮಸೀದಿಯ ಎದುರಿನಲ್ಲಿ ಮಗುವನ್ನು ತನ್ನ ಬಳಿ ಕೂರಿಸಿಕೊಂಡು ತಾನು ಭಿಕ್ಷಾಟನೆಯನ್ನು ಮಾಡುತ್ತಿದ್ದಲ್ಲದೆ, ಮಗುವಿನಿಂದಲೂ ಭಿಕ್ಷಾಟನೆಯನ್ನು ಮಾಡಿಸಿಕೊಂಡು ಶೋಷಣೆಗೆ ಒಳಪಡಿಸುತ್ತಿದ್ದ ವೇಳೆ ಮಗುವನ್ನು ಕಳೆದುಕೊಂಡ ಭಿಕ್ಷುಕಿ ತನ್ನ ಮಗು ಮತ್ತು ಆರೋಪಿತೆಯನ್ನು ಗುರುತಿಸಿದ್ದಳು.
ಈ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಅಂದಿನ ನಿರೀಕ್ಷಕ ರಾಮಕೃಷ್ಣ. ಕೆ.ಕೆ ಹಾಗೂ ಅಂದಿನ ಉಪನಿರೀಕ್ಷಕ ಪ್ರದೀಪ್.ಟಿ. ಆರ್ ಅವರು ಸಮಗ್ರ ತನಿಖೆ ನಡೆಸಿ ಒಟ್ಟು 20 ಸಾಕ್ಷಿದಾರರನ್ನು ತನಿಖೆ ನಡೆಸಿ ಆರೋಪಿತೆಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 363 (ಎ), 370 ರಡಿಯಲ್ಲಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಮಗುವಿನ ಜೈವಿಕ ತಾಯಿ ಯಾರು ಎಂದು ರುಜುವಾತು ಮಾಡುವ ಬಗ್ಗೆ ಮಗುವಿನ, ತಾಯಿಯ ಹಾಗೂ ಅಪಹರಣ ಮಾಡಿದ ಆರೋಪಿತೆಯ ರಕ್ತವನ್ನು ತೆಗೆದು ಡಿಎನ್ಎ ಪರೀಕ್ಷೆಗೆ ಒಳಪಡಿಸಿದ್ದರು. ಆಗ ದೂರುದಾರಳಾದ ಸಂಶಾದ್ ಮಗುವಿನ ಜೈವಿಕ ತಾಯಿ ಎಂದು ವರದಿ ಬಂದಿತ್ತು.
ಈ ಪ್ರಕರಣದ ವಿಚಾರಣೆಯು 2021 ಅಕ್ಟೋಬರ್ 5 ರಂದು ಪ್ರಾರಂಭಗೊಂಡಿದ್ದು, ಅಭಿಯೋಜನೆಯ ಪರ ಒಟ್ಟು 12 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದಲ್ಲಿ ಅಭಿಯೋಜನೆಯ ಸಾಕ್ಷ್ಯಾಧಾರವನ್ನು ಪರಿಗಣಿಸಿದ ನ್ಯಾಯಾಧೀಶರು ಆರೋಪಿತೆಯ ವಿರುದ್ಧ ಫೆಬ್ರವರಿ 1 ರಂದು ಶಿಕ್ಷೆಯ ತೀರ್ಪನ್ನು ಪ್ರಕಟಿಸಿದ್ದು, 4 ವರ್ಷ ಶಿಕ್ಷೆ 10 ಸಾವಿರ ರೂ. ದಂಡ ಪಾವತಿ, ದಂಡ ಪಾವತಿಸಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಶಿಕ್ಷೆಯ ಆದೇಶವನ್ನು ನೀಡಿದ್ದಾರೆ. ಅಭಿಯೋಜನೆಯ ಪರ ಜ್ಯೋತಿ ಪ್ರಮೋದ ನಾಯಕ ಅವರು ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡನೆ ಮಾಡಿದ್ದರು.
ಇದನ್ನೂ ಓದಿ: ಶಿವಮೊಗ್ಗ: 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ