ಶಿವಮೊಗ್ಗ: ನಾಯಿ ಕಡಿತಕ್ಕೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ನಡೆದಿದೆ. ಸಂಗೀತ (38) ನಾಯಿ ಕಡಿತಕ್ಕೆ ಬಲಿಯಾದ ಮಹಿಳೆ.
ಸಂಗೀತ ಅವರಿಗೆ ಜುಲೈ 14 ರಂದು ನಾಯಿ ಕಚ್ಚಿತ್ತು. ಆದರೆ, ಅವರು ಸರಿಯಾದ ಚಿಕಿತ್ಸೆ ಪಡೆದುಕೊಂಡಿರಲಿಲ್ಲ. ಇದರಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಕಳೆದ ಎರಡು ದಿನದ ಹಿಂದೆ ಹೊಸನಗರ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಹೊಸನಗರದಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಮೃತ ಮಹಿಳೆಯ ಕುಟುಂಬಸ್ಥರು ನೋವು ತೋಡಿಕೊಂಡಿದ್ದಾರೆ.
ಗೇರುಪುರ ಮೂಲದ ಸಂಗೀತ ಇತ್ತೀಚೆಗೆ ನಾಯಿ ಕಡಿತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ತೆಗೆದುಕೊಳ್ಳದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅವರು ನೀರು ನೋಡಿದ್ರ ಭಯವಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ, ಹೆಚ್ಚಿನ ಮಾಹಿತಿಗಾಗಿ ಲ್ಯಾಬ್ಗೆ ಮಾಹಿತಿಯನ್ನು ಕಳುಹಿಸಿಕೊಡಲಾಗಿದೆ ಎಂದು ಹೊಸನಗರ ತಾಲೂಕು ಆರೋಗ್ಯಾಧಿಕಾರಿ ಸುರೇಶ್ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಶಿಕಾರಿಪುರದ ಮಹಿಳೆಯೂರ್ವರು ಸಹ ನಾಯಿ ಕಡಿತಕ್ಕೆ ಬಲಿಯಾಗಿದ್ದರು.