ಹಾವೇರಿ: ಜಿಲ್ಲೆಯ ರೈತರ ಪ್ರಮುಖ ಜಾನಪದ ಸೊಗಡಿನ ಕ್ರೀಡೆ ಎಂದರೆ ಅದು ದನ ಬೆದರಿಸುವ ಸ್ಪರ್ಧೆ. ಸುಗ್ಗಿ ಮುಗಿಯುತ್ತಿದ್ದಂತೆ ಬರುವ ದೀಪಾವಳಿಯ ದಿನಗಳಂದು ಆರಂಭವಾಗುವ ಈ ಸ್ಪರ್ಧೆಗೆ ಕೊಬ್ಬರಿ ಹೋರಿ ಹಬ್ಬ ಎಂತಲೂ ಕರೆಯಲಾಗುತ್ತದೆ. ಯಾವುದೇ ಬಹುಮಾನಗಳಿಲ್ಲದೆ ಇದ್ದರೂ ರೈತರು ತಮ್ಮ ಖುಷಿಗಾಗಿ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಇದೀಗ ಈ ಸ್ಪರ್ಧೆ ಕಳೆಗಟ್ಟಲಾರಂಭಿಸಿದೆ.
ನಗರದ ವೀರಭದ್ರೇಶ್ವರ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ವೀರಭದ್ರೇಶ್ವರ ಜಾತ್ರಾ ಸಮಿತಿಯು ದೀಪಾವಳಿ ಅಂಗವಾಗಿ ಏರ್ಪಡಿಸಿದ್ದ ದನ ಬೆದರಿಸುವ ಸ್ಪರ್ಧೆಯಲ್ಲಿ ಸುಮಾರು 300ಕ್ಕೂ ಅಧಿಕ ಕೊಬ್ಬರಿ ಹೋರಿಗಳು ಭಾಗಿಯಾಗಿ ಗಮನ ಸೆಳೆದವು. ದನ ಬೆದರಿಸುವ ರೋಚಕ ಸ್ಪರ್ಧೆಯನ್ನು ಸಾವಿರಾರು ಜನರು ವೀಕ್ಷಿಸಿದರು. ಹಾವೇರಿ ನಗರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ಕೂಡ ಜನರು ಆಗಮಿಸಿ, ಸ್ಪರ್ಧೆ ವೀಕ್ಷಿಸಿ ಖುಷಿಪಟ್ಟರು.
300ಕ್ಕೂ ಅಧಿಕ ಹೋರಿಗಳು ಭಾಗಿ: ಹಾವೇರಿ ನಗರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ರೈತರು ತಮ್ಮ ನೆಚ್ಚಿನ ಹೋರಿಗಳನ್ನ ಸ್ಪರ್ಧೆಗೆ ತಂದಿದ್ದರು. ಸುಮಾರು ನೂರು ಮೀಟರ್ ಆಖಾಡದಲ್ಲಿ ಸಾವಿರಾರು ಜನರ ಪರಸೆ ದಾಟಲು ಹೋರಿಗಳು ಹರಸಾಹಸಪಟ್ಟವು. ಹೋರಿ ಹಿಡಿಯುವ ಪಟ್ಟುಗಳನ್ನು ಕಲಿತ ಪೈಲ್ವಾನರು ಜೀವದ ಹಂಗು ತೊರೆದು ಹೋರಿಗಳ ಮೇಲಿನ ಕೊಬ್ಬರಿ ಹರಿಯಲು ಮುಗಿಬೀಳುತ್ತಿದ್ದ ದೃಶ್ಯ ರೋಚಕವಾಗಿತ್ತು.
ರೈತರು ತಮ್ಮ ನೆಚ್ಚಿನ ಹೋರಿಗಳಿಗೆ ವಿಶೇಷ ಹೆಸರು ಇಟ್ಟು ಆಖಾಡದಲ್ಲಿ ಬಿಟ್ಟಿದ್ದರು. ಹಾವೇರಿ ಕಾ ರಾಜಾ, ಭೈರವ, ಜಾನ್, ಹಾವೇರಿ ಹುಲಿ, ಸಾರಥಿ ಸೇರಿದಂತೆ ವಿವಿಧ ಹೆಸರುಗಳ ಫಲಕಗಳು ಸ್ಪರ್ಧೆ ವೇಳೆ ರಾರಾಜಿಸಿದವು. 'ಹೋರಿ ಬಿಟ್ಟಾರ ಕದ ಹಾಕ್ರಿ' ಎನ್ನುತ್ತಿದ್ದಂತೆ ಎಚ್ಚೆತ್ತ ಪೈಲ್ವಾನರು ಕೊಬ್ಬಿದ ಹೋರಿಗಳ ಕೊಬ್ಬರಿಗೆ ಕೈ ಹಾಕುತ್ತಿದ್ದರು. ನಾಗಾಲೋಟದಲ್ಲಿ ಓಡುತ್ತಿದ್ದ ಹೋರಿಗಳು ಪೈಲ್ವಾನರಿಗೆ ಸಿಗದೆ ಕ್ಷಣಾರ್ಧದಲ್ಲಿ ಮಾಯವಾಗುತ್ತಿದ್ದವು. ಮಿಂಚಿನಂತೆ ಕಣ್ಮರೆಯಾಗುತ್ತಿದ್ದ ಹೋರಿಗಳ ರಭಸಕ್ಕೆ ಪೈಲ್ವಾನರು ಸಹ ಕ್ಷಣಕಾಲ ದಂಗಾಗುತ್ತಿದ್ದರು.
ಇನ್ನು, ಕೆಲ ಹೋರಿಗಳು ಸಿಗುತ್ತಿದ್ದಂತೆ ಮುತ್ತಿಗೆ ಹಾಕುತ್ತಿದ್ದ ಪೈಲ್ವಾನರು ಹೋರಿಗೆ ಕಟ್ಟಿದ ಕೊಬ್ಬರಿ ಸರ ಹರಿಯುತ್ತಿದ್ದರು. ಹೋರಿ ಪೈಲ್ವಾನರ ಕೈ ತಪ್ಪಿಸಿಕೊಳ್ಳುತ್ತಿದ್ದಂತೆ ಹೋರಿ ಮಾಲೀಕರ ಮತ್ತು ನೆರೆದ ಜನರ ಹರ್ಷ ಕೇಕೆಗಳು ಮುಗಿಲುಮುಟ್ಟುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಹೋರಿಗಳಿಗೆ ವಿಶೇಷ ಅಲಂಕಾರ: ಕೊಬ್ಬರಿ ಹೋರಿಗಳಿಗೆ ವಿಶೇಷವಾದ ಅಲಂಕಾರ ಮಾಡಿಕೊಂಡು ರೈತರು ಸ್ಪರ್ಧೆ ಕರೆತಂದಿದ್ದರು. ಕೊಂಬಿಗೆ ಕೋಲ್ಮಣಸು, ಜೂಲ, ಬಲೋನ್, ರಿಬ್ಬನ್, ಗಂಟೆ, ನಾಗಮುಖವಾಡ, ಕಾಲಿಗೆ ವಿಶೇಷವಾದ ವಸ್ತ್ರಗಳಿಂದ ಅಲಂಕರಿಸಿದ್ದರು. ಕೆಲ ರೈತರು ಎತ್ತಿಗೆ ಮೈತುಂಬಾ ಕೊಬ್ಬರಿ ಸರ ಕಟ್ಟಿಕೊಂಡು ಬಂದಿದ್ದರು. ಅಖಾಡದಲ್ಲಿ ಹೋರಿ ಬಿಡುತ್ತಿದ್ದಂತೆ ಕೇಕೆ ಸಿಳ್ಳೆಗಳ ಅಬ್ಬರ ಜೋರಾಗಿತ್ತು.
ದೀಪಾವಳಿ ಬಳಿಕ ವಿಶೇಷ ಬಹುಮಾನ: ದೀಪಾವಳಿ ನಂತರ ನಡೆಯುವ ಸ್ಪರ್ಧೆಗಳಲ್ಲಿ ಹೋರಿಗಳಿಗೆ ವಿಶೇಷವಾದ ಬಹುಮಾನ ಇಡಲಾಗಿರುತ್ತದೆ. ಫ್ರಿಡ್ಜ್, ಬೈಕ್, ಚಿನ್ನ ಸೇರಿದಂತೆ ವಿವಿಧ ಬಹುಮಾನಗಳನ್ನ ಇಡಲಾಗಿರುತ್ತದೆ. ಈ ಸ್ಪರ್ಧೆಗಾಗಿ ರೈತರು ವಿಶೇಷವಾದ ಎತ್ತುಗಳನ್ನು ಸಾಕಿರುತ್ತಾರೆ. ಅವುಗಳಿಗೆ ಪ್ರತ್ಯೇಕವಾದ ಆಹಾರ ತಿನಿಸುತ್ತಾರೆ. ಕಿಲೋ ಮೀಟರ್ ಗಟ್ಟಲೇ ಓಡಿಸುವುದು, ನದಿಗಳಲ್ಲಿ ಈಜಾಡಿಸುವ ಮೂಲಕ ಎತ್ತುಗಳಿಗೆ ದಮ್ಮುಗಟ್ಟಿಸುತ್ತಾರೆ. ನಂತರ ಹೋರಿಗಳನ್ನು ಈ ರೀತಿಯ ಸ್ಪರ್ಧೆಗಳಲ್ಲಿ ಬಿಡುವ ಮೂಲಕ ಸಂಭ್ರಮಿಸುತ್ತಾರೆ. ಇನ್ನು ಈ ರೀತಿಯ ಹೋರಿಗಳಿಗೆ ಜನ್ಮದಿನ ಆಚರಿಸುವ ಸಂಪ್ರದಾಯ ಸಹ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ. ದೀಪಾವಳಿ ಆಗಮನದೊಂದಿಗೆ ರೈತರ ಹಬ್ಬ ದನ ಬೆದರಿಸುವ ಸ್ಪರ್ಧೆ ಕಳೆಗಟ್ಟಲಾರಂಭಿಸುತ್ತದೆ.
ಇದನ್ನೂ ಓದಿ: ಬೆಳಗಾವಿ ಎಮ್ಮೆಗಳ ಓಟಕ್ಕಿದೆ ನೂರಾರು ವರ್ಷಗಳ ಇತಿಹಾಸ: ಮೈನವಿರೇಳಿಸಿದ ಎಮ್ಮೆಗಳ ಜೊತೆಗಿನ ಯುವಕರ ಸಾಹಸ