ಹುಬ್ಬಳ್ಳಿ: ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಜನರಿಗೆ 3 ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್‌ನ ಆರ್.ಆರ್. ಈಜಿ ಟ್ರೇಡಿಂಗ್ ಕಂಪನಿ ಹಾಗೂ ಅಕ್ಯೂಮನ್ ಕ್ಯಾಪಿಟಲ್ ಟ್ರೇಡಿಂಗ್ ಲಿಮಿಟೆಡ್ ಕಂಪನಿಯ ಪಾಲದಾರರಿಬ್ಬರು ಹಣ ಹೂಡಿಕೆ ಮಾಡಿದರೆ ಶೇ. 4ರಿಂದ 5ರಷ್ಟು ಲಾಭಾಂಶ ನೀಡುವುದಾಗಿ ಹೇಳಿ, ಹಲವರಿಂದ 3.52ಕೋಟಿ ರೂ. ಹೂಡಿಕೆ ಮಾಡಿಕೊಂಡಿದ್ದರು. ಬಳಿಕ ನಂಬಿಕೆ ದ್ರೋಹವೆಸಗಿರುವ ಬಗ್ಗೆ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಂಪನಿಯ ಸಂತೋಷ ಮುರುಡೇಶ್ವರ, ಆನಂದ ಹೆಬಸೂರು ಎಂಬುವರು ತಮ್ಮ ಪಾಲುದಾರಿಕೆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಲಾಭಾಂಶ ಪಡೆಯಬಹುದೆಂದು ನಂಬಿಸಿ, 2022 ರ ಏಪ್ರಿಲ್‌ನಿಂದ 2024 ರ ಜನವರಿ ನಡುವೆ 2ಲಕ್ಷ ರೂ. ಹೂಡಿಕೆ ಮಾಡಿಕೊಂಡಿದ್ದರು. ಕೆಲ ತಿಂಗಳುವರೆಗೆ ಲಾಭಾಂಶ ಕೊಟ್ಟು ನಂಬಿಕೆ ಬರುವಂತೆ ಮಾಡಿದ್ದರು. ನಂತರ ಹೂಡಿಕೆ ಮಾಡಿಕೊಂಡ ಹಣ ಮತ್ತು ಲಾಭಾಂಶ ಕೊಡದೆ ವಂಚಿಸಿದ್ದಾರೆ. ಅಲ್ಲದೆ ಇನ್ನು ಹಲವರಿಂದ 3.50 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ಮೋಸವೆಸಗಿದ್ದಾರೆ ಎಂದು ಆರೋಪಿಸಿ ಸಹದೇವಪ್ಪ ಗೌಳಿ ಎಂಬುವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಗಾಂಜಾ ಮಾರಾಟದಲ್ಲಿ ತೊಡಗಿದ್ದ 9 ಜನರ ಬಂಧನ - Marijuana sellers arrested