ಬೆಂಗಳೂರು: ಬನ್ನೇರುಘಟ್ಟ ವನ್ಯಜೀವಿ ವಲಯದ ಕಲ್ಕೆರೆ ಗಸ್ತಿನಲ್ಲಿ ಕಾವಲು ಕಾಯುವಾಗ ಆನೆ ದಾಳಿಗೆ ಒಳಗಾಗಿ ಮೃತಪಟ್ಟ ಸಿಬ್ಬಂದಿ ಮಾದಣ್ಣ ನಿಧನಕ್ಕೆ ಸಂತಾಪ ಸೂಚಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಮೃತರ ಕುಟುಂಬಕ್ಕೆ ಒಂದು ವಾರದೊಳಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಬನ್ನೇರುಘಟ್ಟ ವನ್ಯಜೀವಿ ವಲಯದಲ್ಲಿ ನಿನ್ನೆ ರಾತ್ರಿ ಕಾವಲು ಕಾಯುತ್ತಿದ್ದ ವೇಳೆ ಆನೆ ದಾಳಿಯಿಂದ ಮೃತಪಟ್ಟ ಅರಣ್ಯ ಸಿಬ್ಬಂದಿ ಮಾದಣ್ಣ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದೆನು.
— Eshwar Khandre (@eshwar_khandre) July 12, 2024
ಆನೆಗಳ ಇರುವಿಕೆಯನ್ನು ಪತ್ತೆ ಮಾಡುವಲ್ಲಿ ಮಾದಣ್ಣ ವಿಶೇಷ ನೈಪುಣ್ಯತೆ ಹೊಂದಿದ್ದರು. ಅವರ ಅಗಲಿಕೆಯಿಂದ ವನ್ಯಜೀವಿ ಸಂರಕ್ಷಣಾ ವಲಯಕ್ಕೆ ತುಂಬಲಾರದ ನಷ್ಟ… pic.twitter.com/S65XgbWmz0
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಬಳಿ ಮೃತ ಮಾದಣ್ಣನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಪುಷ್ಪ ನಮನ ಸಲ್ಲಿಸಿದ ಈಶ್ವರ್ ಖಂಡ್ರೆ, ಆನೆಗಳ ಇರುವಿಕೆಯನ್ನು ತಿಳಿಯುವಲ್ಲಿ ನೈಪುಣ್ಯತೆ ಹೊಂದಿದ್ದ ಮಾದಣ್ಣ ನಿಧನದಿಂದ ಇಲಾಖೆ ಒಬ್ಬ ಪ್ರಾಮಾಣಿಕ ಸಿಬ್ಬಂದಿಯನ್ನು ಕಳೆದುಕೊಂಡಿದೆ ಎಂದರು.
ಅನುಕಂಪದ ನೌಕರಿ: ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗ ದೊರಕಿಸುವ ಪ್ರಯತ್ನ ಮಾಡುವ ಭರವಸೆಯನ್ನೂ ಸಚಿವರು ನೀಡಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ದೀಕ್ಷಿತ್ ಮತ್ತಿತರರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ನಿನ್ನೆ ಮಧ್ಯರಾತ್ರಿ 12:30ರ ಸುಮಾರಿನಲ್ಲಿ ಕಲ್ಕೆರೆ ಗಸ್ತಿನ ದೊಡ್ಡ ಬಂಡೆ ಅರಣ್ಯ ಪ್ರದೇಶದ ಬಳಿ ಕಾವಲು ಕಾಯುತ್ತಿದ್ದ ಸಂದರ್ಭದಲ್ಲಿ ಕಾಡಾನೆಯ ದಾಳಿಯಿಂದ ಮಾದಣ್ಣ ಮೃತಪಟ್ಟಿದ್ದರು.
ಇದನ್ನೂ ಓದಿ: ಬೆಂಗಳೂರು: ಆನೆ ದಾಳಿಗೆ ಅರಣ್ಯ ಗುತ್ತಿಗೆ ಕಾರ್ಮಿಕ ಸಾವು - Forest contract labour death