ಹುಬ್ಬಳ್ಳಿ: ಕರ್ನಾಟಕ-ಗೋವಾ ಮಾರ್ಗದಲ್ಲಿನ ದೂಧ್‌ಸಾಗರ ಬಳಿ ಗೂಡ್ಸ್ ರೈಲು ಹಳಿ ತಪ್ಪಿ ಸಂಚಾರ ಕಡಿತಗೊಂಡಿದೆ. ಹೀಗಾಗಿ ಇಂದು 1,200 ಪ್ರಯಾಣಿಕರನ್ನು ವಾಸ್ಕೋ ಹಾಗೂ ಮಡಗಾಂವ್ಗೆ ವಿಶೇಷ ಬಸ್ಗಳ ಮೂಲಕ ಕಳುಹಿಸಲಾಯಿತು.
ಕರ್ನಾಟಕ ಹಾಗೂ ಗೋವಾ ಸಂಪರ್ಕಿಸುವ ದೂಧ್‌ಸಾಗರ ರೈಲು ಮಾರ್ಗದಲ್ಲಿ ರೈಲು ಹಳಿ ತಪ್ಪಿದ್ದರಿಂದ ಉಭಯ ರಾಜ್ಯಗಳ ನಡುವೆ ರೈಲು ಸಂಪರ್ಕ ಕಡಿತವಾಗಿದೆ. ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಶಾಲಿಮಾರ್ ನಿಂದ ವಾಸ್ಕೊಗೆ ಹೋಗಬೇಕಾಗಿದ್ದ ಅಮರಾವತಿ ಎಕ್ಸ್ಪ್ರೆಸ್ ರೈಲನ್ನು ಹುಬ್ಬಳ್ಳಿಯಲ್ಲಿ ನಿಲ್ಲಿಸಿದ್ದು, ಅದರಲ್ಲಿ 1,200 ಪ್ರಯಾಣಿಕರನ್ನು ಕಳುಹಿಸಲಾಗಿದೆ. ಶನಿವಾರವೂ ಕೂಡ 27 ವಿಶೇಷ ಸಾರಿಗೆ ಬಸ್ಗಳ ಮೂಲಕ 1,300ಕ್ಕೂ ಹೆಚ್ಚು ಪ್ರಯಾಣಿಕರನ್ನು ವಾಸ್ಕೋ, ಮಡಗಾಂವ್, ಪಣಜಿಗೆ ಕಳುಹಿಸಲಾಗಿತ್ತು.
ಸಾರಿಗೆ ಸಂಸ್ಥೆ ಹಾಗೂ ರೈಲ್ವೆ ಇಲಾಖೆ ಸಹಯೋಗದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದೆ ತಮ್ಮ ತಮ್ಮ ಸ್ಥಳಗಳಿಗೆ ತಲುಪಿದ್ದಾರೆ.
ರೈಲು ಹುಬ್ಬಳ್ಳಿಗೆ ಆಗಮಿಸುವುದಕ್ಕೆ ಮುಂಚಿತವಾಗಿಯೇ ಬಸ್ಗಳನ್ನು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ರೈಲು ಆಗಮಿಸುತ್ತಿದ್ದಂತೆ ಪ್ರಯಾಣಿಕರನ್ನು ಹತ್ತಿಸಿಕೊಂಡ ಒಟ್ಟು 25 ಬಸ್‌ಗಳು ವಾಸ್ಕೋ, ಮಡಗಾಂವ್ ಹಾಗೂ ಪಣಜಿ ಕಡೆಗೆ ತೆರಳಿದವು.
"ಇವತ್ತು 25 ಬಸ್ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಶನಿವಾರ 27 ಬಸ್ಗಳನ್ನ ವ್ಯವಸ್ಥೆ ಮಾಡಿದ್ದೆವು. ಒಟ್ಟು ಇಲ್ಲಿಯವರೆಗೂ ಹೊರ ರಾಜ್ಯಗಳ ಪ್ರಯಾಣಿಕರ ಅನುಕೂಲಕ್ಕಾಗಿ 52 ಬಸ್ಗಳನ್ನು ವ್ಯವಸ್ಥೆ ಮಾಡುವ ಮೂಲಕ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಲಾಗಿದೆ" ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ ತಿಳಿಸಿದ್ದಾರೆ.
ಇದನ್ನೂ ಓದಿ: ದೂಧಸಾಗರ್ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೋಗಿ ಪಲ್ಟಿ