ಚಾಮರಾಜನಗರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಯುವಕನ ಅಪರಾಧ ಸಾಬೀತಾದ ಹಿನ್ನೆಲೆ ಚಾಮರಾಜನಗರದ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ ವಿಶೇಷ ಪೋಕ್ಸೋ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿದೆ.
ಕೊಳ್ಳೇಗಾಲ ತಾಲೂಕಿನ ಕೆ.ಎಸ್.ದೊಡ್ಡಿ ಗ್ರಾಮದ ರಾಜಪ್ಪ(26) ಎಂಬಾತ ಶಿಕ್ಷೆಗೊಳಗಾದ ಅಪರಾಧಿ. 16 ವರ್ಷ ವಯಸ್ಸಿನ ಅಪ್ರಾಪ್ತೆಯನ್ನು ಈತ ಪುಸಲಾಯಸಿ ತಮಿಳುನಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಸಾಕ್ಷ್ಯಾಧಾರಗಳಿಂದ ಯುವಕನ ಕೃತ್ಯ ಸಾಬೀತಾದ ಹಿನ್ನೆಲೆ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ ವಿಶೇಷ ಪೋಕ್ಸೋ ನ್ಯಾಯಾಧೀಶರಾದ ಎನ್.ಆರ್ ಲೋಕಪ್ಪ ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಜೊತೆಗೆ, ನೊಂದ ಬಾಲಕಿಗೆ 4 ಲಕ್ಷ ರೂ. ಪರಿಹಾರ ಕೊಡಬೇಕೆಂದು ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.
ಲೈಂಗಿಕ ದೌರ್ಜನ್ಯ ಎಸಗಿದವನಿಗೆ 3 ವರ್ಷ ಜೈಲು: ಅಪ್ರಾಪ್ರೆಗೆ ಲೈಂಗಿಕ ದೌರ್ಜನ್ಯ ನೀಡಿದ ಯುವಕನ ಅಪರಾಧ ಸಾಬೀತಾದ ಹಿನ್ನೆಲೆ ಚಾಮರಾಜನಗರದ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ ವಿಶೇಷ ಪೋಕ್ಸೋ ನ್ಯಾಯಾಲಯವು 3 ವರ್ಷ ಶಿಕ್ಷೆ ನೀಡಿ ಆದೇಶಿಸಿದೆ. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಪ್ರದೀಪ್ ಶಿಕ್ಷೆಗೊಳಗಾದ ಅಪರಾಧಿ. 16 ವರ್ಷ ವಯಸ್ಸಿನ ಅಪ್ರಾಪ್ತೆಯನ್ನು ಈತ ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ನೀಡಿದ್ದನು. ಈ ಸಂಬಂಧ ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಸಾಕ್ಷ್ಯಾಧಾರಗಳಿಂದ ಯುವಕನ ಕೃತ್ಯ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರಾದ ಎನ್.ಆರ್ ಲೋಕಪ್ಪ ಯುವಕನಿಗೆ 3 ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಜೊತೆಗೆ, ನೊಂದ ಬಾಲಕಿಗೆ 1 ಲಕ್ಷ ರೂ. ಪರಿಹಾರ ಕೊಡಬೇಕೆಂದು ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.
ಇದನ್ನೂ ಓದಿ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್