ಶಿವಮೊಗ್ಗ : ಓಮ್ನಿ ಕಾರಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿ, 2 ಕೆಜಿ 150 ಗ್ರಾಂ ಒಣ ಗಾಂಜಾದೊಂದಿಗೆ ಇಬ್ಬರನ್ನು ಬಂಧಿಸಿದ್ದಾರೆ.
ಸಾಗರದಿಂದ ತೀರ್ಥಹಳ್ಳಿಗೆ ಓಮ್ನಿ ಕಾರಿನಲ್ಲಿ ಗಾಂಜಾ ಸಾಗಿಸಿ, ಮಾರಾಟ ಮಾಡಲು ತೆಗೆದುಕೊಂಡು ಹೋಗುವಾಗ ಸಿಬ್ಬಂದಿ ಓಮ್ನಿ ತಡೆದು ವಿಚಾರಣೆ ನಡೆಸಿದ್ದಾರೆ. ಆಗ ಕಾರಿನಲ್ಲಿ 2 ಕೆಜಿ 150 ಗ್ರಾಂ ಒಣ ಗಾಂಜಾ ಇರುವುದು ಪತ್ತೆಯಾಗಿದೆ.
ಈ ಗಾಂಜಾ ಸುಮಾರು 1.60 ಲಕ್ಷ ರೂ. ಮೌಲ್ಯದ್ದು ಎಂದು ತಿಳಿದುಬಂದಿದೆ. ಗಾಂಜಾವನ್ನು ಸಾಗಿಸುತ್ತಿದ್ದ ಸಾಗರ ತಾಲೂಕು ಆಚಾಪುರದ ಮಹಮ್ಮದ್ ಬೇಗ್ (38) ಹಾಗೂ ಹೊಸನಗರ ತಾಲೂಕು ಕೆಂಚನಾಳ ಗ್ರಾಮದ ಗಜೇಂದ್ರ(37) ಎಂಬುವರನ್ನು ಬಂಧಿಸಲಾಗಿದೆ.
ಇದರ ಜೊತೆ 2.50 ಲಕ್ಷ ರೂ. ಮೌಲ್ಯದ ಓಮ್ನಿ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ. ದಾಳಿಯಲ್ಲಿ ತೀರ್ಥಹಳ್ಳಿ ಪಿಐ ಅಶ್ವಥ್ ಗೌಡ, ಪಿಎಸ್ಐ ಶಿವನಗೌಡ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳ್ಳನ ಬಂಧನ, ಎರಡು ಬೈಕ್ ವಶಕ್ಕೆ : ಮನೆ ಮುಂದೆ ನಿಲ್ಲಿಸಿದ ಬೈಕ್ ಕಾಣೆಯಾಗಿದೆ ಎಂದು ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ತನಿಖೆ ನಡೆಸಿದಾಗ ಶಿವಮೊಗ್ಗದ ಅಲ್ಲಾಭಕ್ಷ ಅಲಿಯಾಸ್ ಪೊಟ್ಯಾಟೋ(19) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವನನ್ನು ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕದ್ದಿರುವ ಕುರಿತು ಒಪ್ಪಿಕೊಂಡಿದ್ದಾರೆ. ಇವರಿಂದ 90 ಸಾವಿರ ರೂ. ಮೌಲ್ಯದ ಎರಡು ಬೈಕ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ಚಾಮರಾಜನಗರ: ₹1.44 ಕೋಟಿ ಮೌಲ್ಯದ ಗಾಂಜಾ ವಶ, ನಾಲ್ವರ ಬಂಧನ