ಬೆಳಗಾವಿ: ಖಾನಾಪುರ ಹಾಗೂ ಬೆಳಗಾವಿ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಎರಡು ದಿನಗಳ ಕಾಲ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರಜೆ ಘೋಷಿಸಿದ್ದಾರೆ.
ಬೆಳಗಾವಿ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜು.22 ರಿಂದ ಜು.23 ರವರೆಗೆ. ಅದೇ ರೀತಿ ಖಾನಾಪುರ ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ-ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜುಲೈ 22 ರಿಂದ 23ರ ವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ವಿವಿಧ ಸ್ಥಗಳಿಗೆ ಡಿಸಿ ಭೇಟಿ: ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಹಿರಿಯ ಅಧಿಕಾರಿಗಳು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಇದ್ದರು.
ಖಾನಾಪುರ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಸ್ತುತದ ಸ್ಥಿತಿಗತಿ ಬಗ್ಗೆ, ಸಂಚಾರ ವ್ಯವಸ್ಥೆಯ ಬಗ್ಗೆ ಹಾಗೂ ನದಿ ಹಾಗೂ ಹೊಳೆಗಳ ನೀರಿನ ಮಟ್ಟ ಪರಿಶೀಲಿಸಿದರು. ತಾಲೂಕಿನಲ್ಲಿನ ಕುಸುಮಳಿ ಗ್ರಾಮದಲ್ಲಿನ ಸೇತುವೆ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನವನ್ನು ನೀಡಿದರು.
ಶಿಥಿಲಗೊಂಡ ಕುಸಮಳ್ಳಿ ಸೇತುವೆ, ಭಾರಿ ವಾಹನಗಳ ಓಡಾಟಕ್ಕೆ ಬ್ರೇಕ್: ಮತ್ತೊಂದೆಡೆ, ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಕುಸಮಳ್ಳಿ ಗ್ರಾಮದ ಬಳಿಯ ಸೇತುವೆ ಶಿಥಿಲಗೊಂಡಿದೆ. ಸೇತುವೆ ಶಿಥಿಲಾವಸ್ಥೆ ತಲುಪಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈ ರಸ್ತೆಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
ಹೌದು, ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮಳೆರಾಯ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಇದರ ಪರಿಣಾಮ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇನ್ನು ಜತ್ತ-ಜಾಂಬೋಟಿ ರಸ್ತೆಯಲ್ಲಿ ಬರುವ ಕುಸಮಳ್ಳಿ ಸೇತುವೆ ಶಿಥಿಲಗೊಂಡ ಪರಿಣಾಮ ಕಳೆದ 24 ಗಂಟೆಗಳಿಂದ ಲಾರಿಗಳು ಸಾಲುಗಟ್ಟಿ ನಿಂತಲ್ಲಿಯೇ ನಿಂತಿವೆ. ಸರಕು ಹೊತ್ತು ರಸ್ತೆ ಪಕ್ಕದಲ್ಲಿಯೇ ನೂರಾರು ಲಾರಿಗಳು ನಿಂತಿದ್ದು, ಏಕಾಏಕಿ ಭಾರಿ ವಾಹನಗಳನ್ನು ತಡೆದಿದ್ದರಿಂದ ಲಾರಿ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಿರುವ ಸುಮಾರು 90 ವರ್ಷಕ್ಕೂ ಹಳೆಯದಾದ ಕುಸಮಳ್ಳಿ ಸೇತುವೆ ಸದ್ಯ ಅವಸಾನದ ಅಂಚಿಗೆ ತಲುಪಿದೆ. ಸೇತುವೆ ತಡೆಗೋಡೆ ಬಿರುಕು ಬಿಟ್ಟಿದ್ದು, ಮೊದಲೇ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಇಂಥ ವೇಳೆ ಭಾರಿ ವಾಹನಗಳು ಓಡಾಡಿ ಅನಾಹುತ ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಪರಿಣಾಮ ಸಾಲು ಸಾಲು ಲಾರಿಗಳು ನಿನ್ನೆಯಿಂದ ನಿಂತಲಿಯೇ ನಿಂತಿವೆ.
ಸಂಚಾರ ಸ್ಥಗಿತಗೊಳಿಸಿದ್ದಕ್ಕೆ ಲಾರಿ ಚಾಲಕರು ಆಕ್ರೋಶ ಹೊರ ಹಾಕಿದ್ದು, ರಸ್ತೆ ಬಂದ್ ಮಾಡುವುದನ್ನು ಅಧಿಕಾರಿಗಳು ಮೊದಲೇ ಹೇಳಬೇಕಿತ್ತು. ಏಕಾಏಕಿ ಬಂದ್ ಮಾಡಿದ್ರೆ ನಾವು ಎಲ್ಲಿಗೆ ಹೋಗಬೇಕು?. ಭಾರಿ ಮಳೆಯಿಂದ ಗೋವಾದಲ್ಲಿ 8 ಗಂಟೆ ನಿಂತು ಬಂದಿದ್ದೇವೆ. ಬೇರೆ, ಬೇರೆ ವಾಹನಗಳನ್ನು ಬಿಡುತ್ತಿದ್ದಾರೆ. ಅವುಗಳಿಂದ ಸೇತುವೆಗೆ ಹಾನಿ ಆಗುವುದಿಲ್ಲವೇ?. ಬಂದ್ ಮಾಡೋದಿದ್ದರೆ ಎಲ್ಲಾ ವಾಹನಗಳನ್ನು ಮಾಡಲಿ. ಲಾರಿಯಲ್ಲಿರುವ ಸರಕು ಎಲ್ಲಾ ಮಳೆಯಲ್ಲಿ ನೆಂದು ಹೋದರೆ ನಾವು ಏನು ಮಾಡುವುದ ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.
ಖಾನಾಪುರ ತಾಲೂಕಿನ ಜಾಂಬೋಟಿ-ಪೀರಣವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಮಳ್ಳಿ ಸೇತುವೆ ಹಳೆಯದಾಗಿದ್ದರಿಂದ ಈ ರಸ್ತೆ ಮತ್ತು ಜಾಂಬೋಟಿಯಿಂದ ಖಾನಾಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ಭಾರಿ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನಿರ್ಬಂಧ ವಿಧಿಸಿದ್ದಾರೆ.
ಜಾಂಬೋಟಿ, ಚೋರ್ಲಾದಲ್ಲಿ ಹಲವು ಸೇತುವೆಗಳು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಗೋವಾ ಸಂಚರಿಸುವ ಭಾರಿ ವಾಹನಗಳ ಚಾಲಕರಿಗೆ ಬದಲಿ ಮಾರ್ಗ ಸೂಚಿಸಲಾಗಿದೆ. ಬೆಳಗಾವಿಯಿಂದ ತೆರಳುವವರು ಪೀರನವಾಡಿಯಿಂದ ಎಡಕ್ಕೆ ತಿರುವು ಪಡೆದುಕೊಂಡು, ಖಾನಾಪುರ ಮಾರ್ಗವಾಗಿ ಗೋವಾಗೆ ಹೋಗುವಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸೂಚಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮುಂಗಾರು ಅಬ್ಬರ; ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ - KARNATAKA RAIN FORECAST